ಗ್ರಾಮ ಪಂಚಾಯತ್‌ ಚುನಾವಣೆ ಸ್ಪರ್ಧೆಗಿಳಿದ ಅಂಕೋಲದ ಎಂಎಲ್‌ಎ

Public TV
2 Min Read
local mla leelavathi 3

ಕಾರವಾರ: ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಎಂಎಲ್ಎ ಬದಲಾಗ್ತಾರೆ. ಆದ್ರೆ ಆಯ್ಕೆಯಾದ ಎಂಎಲ್ಎಗಳು ಗ್ರಾಮಕ್ಕೆ ಭೇಟಿ ನೀಡುವುದು ಕೂಡ ಅಪರೂಪ. ಆದರೆ ಅಂಕೋಲಾದ ಗ್ರಾಮವೊಂದರಲ್ಲಿ 75 ವರ್ಷದ ʼಎಂಎಲ್‌ಎʼ ಆರನೇ ಬಾರಿ ಲೋಕಲ್ ದಂಗಲ್‌ಗೆ ಧುಮುಕಿದ್ದಾರೆ.

ಅಂಕೋಲಾದ ಮಂಜುಗುಣಿ ಗ್ರಾಮದ ಲೀಲಾವತಿ ನಾಯ್ಕ ಸತತ ಆರನೇ ಬಾರಿ ಸ್ಪರ್ಧೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 1993 ರಿಂದ ಇಲ್ಲಿಯವರೆಗೆ ಇವರು ಲೋಕಲ್ ಅಖಾಡಕ್ಕೆ ಧುಮುಕಿ ಸಕ್ಸಸ್ ಆಗಿದ್ದಾರೆ. ಒಮ್ಮೆ ಉಪಾಧ್ಯಕ್ಷೆಯಾಗಿ ಕಳೆದ ಬಾರಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಲೀಲಾವತಿ ಮಂಜುಗುಣಿ ಭಾಗದ ಖಾಯಂ ಎಂಎಲ್ಎ ಎಂದೇ ಪ್ರಸಿದ್ಧರಾಗಿದ್ದಾರೆ.

ಯಾವುದೇ ಕೆಲಸ ಇರಲಿ ತಕ್ಷಣವೇ ಓಡಿ ಬರುವ ಲೀಲಾವತಿ, ಊರವರ ಪಾಲಿನ ಎಂಎಲ್ಎ ಕೂಡ ಹೌದು. ತಮ್ಮ ಹೆಸರಿನ ‘ಎಂಎಲ್ಎ’ ಎಂಬ ವಿಸಿಟಿಂಗ್ ಕಾರ್ಡ್ ಹಿಡಿದು ಆಯಾ ಇಲಾಖೆಗೆ ತೆರಳಿ ಗ್ರಾಮದ ಯಾವುದೇ ಕೆಲಸ ಇರಲಿ ಮಾಡಿಯೇ ಮುಗಿಸುವುದು  ಇವರ ವಿಶೇಷ.

local mla leelavathi

ಲೀಲಾವತಿ ಓದಿದ್ದು ಮೂರನೇ ತರಗತಿ. ಹೆಚ್ಚಾಗಿ ಅಕ್ಷರಭ್ಯಾಸ ಪಡೆಯದ ಇವರು ಈ ಹಿಂದೆ ಬೆಳಂಬಾರ ಗ್ರಾಮ ಪಂಚಾಯತ್ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತ್ ಆಗುವಲ್ಲಿ ಇವರ ಶ್ರಮ ಕೂಡ ಇದೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಉತ್ತಮ ಜನನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಇಲ್ಲಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾರು ಕಾಲಿಡುವುದಿಲ್ಲ. ಊರವರಿಗೆ ಲೀಲಾವತಿಯವರೇ ಎಲ್ಲಾ. ಹೀಗಾಗಿ ಲೀಲಾವತಿ ಈ  ಚುನಾವಣೆಯಲ್ಲೂ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಇಲ್ಲಿನ ಜನತೆ.

local mla leelavathi 2

ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯೆಯಾದರೂ ಇವರು ಸ್ವಂತ ಮನೆ ಮಾಡಿಕೊಂಡಿಲ್ಲ. ಚಿಕ್ಕದಾದ ಮನೆಯಲ್ಲಿಯೇ ವಾಸವಾಗಿದ್ದಾರೆ. ಯಾವುದೇ ಸ್ವಾರ್ಥ ಹೊಂದದೇ ಗ್ರಾಮದ ನಾಗರಿಕರಿಗೆ ಬೇಕಾಗುವ ವಸತಿ ಯೋಜನೆ, ಶೌಚಾಲಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ತಲುಪಿಸುತ್ತಿದ್ದಾರೆ. ಗ್ರಾಮದ ನಾಗರಿಕರು ಫಲಾನುಭವಿಯಾಗಲು ಬೇಕಾಗುವ ಕೆಲಸವನ್ನ ಮಾಡಿಕೊಡುತ್ತಿದ್ದಾರೆ. ತಮ್ಮೂರಿನಲ್ಲಿ ಇನ್ನೂ ಕೆಲಸ ಕೆಲಸಗಳು ಬಾಕಿ ಇದೆ. ಈ ಬಾರಿ ಆಯ್ಕೆಯಾದಲ್ಲಿ ಖಂಡಿತವಾಗಿಯೇ ಅವೆಲ್ಲಾ ಕೆಲಸಗಳನ್ನ ಮಾಡಿಕೊಡಬೇಕು ಅಂತಾರೆ ಲೀಲಾವತಿ.

ಅಕ್ಷರ ಜ್ಞಾನ ಹೆಚ್ಚಿಲ್ಲದಿದ್ದರೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಏನೂ ಬೇಕಾದರೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸೋಲಿಲ್ಲದೇ ಸತತ ಗೆಲುವು ಕಾಣುತ್ತಿರುವ ಲೀಲಾವತಿಯೇ ಸಾಕ್ಷಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *