ರಾಯಚೂರು: ರಸ್ತೆಯಲ್ಲಿ ದಾರಿ ಬಿಡದೇ ಅಡ್ಡ ನಿಂತಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದಲ್ಲಿ ನಡೆದಿದೆ.
ಮಾನ್ವಿ ತಾಲೂಕಿನ ಗವಿಗಟ್ಟ ಗ್ರಾಮದ ಅಮರೇಶ್ (27) ಕೊಲೆಯಾದ ಯುವಕ. ಗವಿಗಟ್ಟ ಗ್ರಾಮದ ಯುವಕರು ಶಾವಂತಗಲ್ ಗ್ರಾಮ ದೇವತೆ ದ್ಯಾವಮ್ಮ ದೇವರ ಮಾಡಲು ಸಂಬಂಧಿಕರ ಮನೆಗೆ ಬಂದಿದ್ದರು. ಯಲ್ಲಪ್ಪ, ಹನುಮಂತ, ಅಮರೇಶ್, ಯಲ್ಲಪ್ಪ ನಾಲ್ಕು ಜನ ಬೈಕಿನಲ್ಲಿ ದೇವಸ್ಥಾನಕ್ಕೆ ಹೋಗುವಾಗ ರಸ್ತೆಯಲ್ಲಿ ಅಡ್ಡ ನಿಂತಿದ್ದ ಜನ ದಾರಿ ಬಿಟ್ಟಿಲ್ಲ. ದಾರಿಗೆ ಅಡ್ಡ ನಿಂತಿದ್ದ ಕಾರಣಕ್ಕೆ ಜಗಳ ಶುರುವಾಗಿದೆ. ಬೇರೆ ಗ್ರಾಮದಿಂದ ದೇವರು ಮಾಡಲು ಬಂದಿದ್ದವರು ಈ ನಾಲ್ಕು ಜನರ ಮೇಲೆ ಹಲ್ಲೆ ಮಾಡಿದ್ದಾರೆ.
ಅಲ್ಲಿಗೆ ಸುಮ್ಮನಾಗಿ ವಾಪಸ್ ಬಂದವರು ಪುನಃ ಹೇಗೆ ಹೊಡೆದರು ಅಂತ ಕೇಳಲು ಹೋದಾಗ ಗಲಾಟೆ ನಡೆದಿದೆ. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಅಮರೇಶ್‍ನನ್ನ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಆರೋಪಿಗಳ ಗುರುತು ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.