– ತಲೆ, ಎದೆಗೆ ಗುಂಡಿಕ್ಕಿ ಕೊಂದ
ಲಕ್ನೋ: ತನ್ನ ಸಾಕು ನಾಯಿಗಳಿಗೆ ರೊಟ್ಟಿ ಮಾಡದಕ್ಕೆ ತಮ್ಮನೇ ಅಕ್ಕನಿಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಗರದ ಕೈಲಾಶ್ ವಾಟಿಕಾ ಕಾಲೋನಿಯಲ್ಲಿ ನಡೆದಿದೆ.
ಆಶೀಶ್ ಕುಮಾರ್ ಅಕ್ಕನನ್ನ ಕೊಂದ ತಮ್ಮ. ಕೈಲಾಶ್ ವಾಟಿಕಾ ಕಾಲೋನಿಯಲ್ಲಿ ಅಣ್ಣ ಯೋಗೇಂದ್ರ, ತಾಯಿ ಸರೋಜ, ಸೋದರಿ ಪರೂಲ್ ಜೊತೆ ವಾಸವಾಗಿದ್ದು, 20ಕ್ಕೂ ಅಧಿಕ ನಾಯಿಗಳನ್ನ ಸಾಕಿದ್ದನು. ಆಶೀಷ್ ವಿವಿಧ ತಳಿಯ ನಾಯಿಗಳನ್ನ ಸಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದನು.
ಸೋಮವಾರ ರಾತ್ರಿ ಸುಮಾರು 7.30ಕ್ಕೆ ಸೋದರಿ ಪರೂಲ್ ಗೆ ನಾಯಿಗಳಿಗೆ ರೊಟ್ಟಿ ಮಾಡಲು ಹೇಳಿದ್ದಾನೆ. ಆದ್ರೆ ಪರೂಲ್ ರೊಟ್ಟಿ ಮಾಡಲು ಒಪ್ಪಿಲ್ಲ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳವೇ ನಡೆದಿದೆ. ಕೋಪದಲ್ಲಿ ಆಶೀಷ್ ತನ್ನ ಬಳಿಯಲ್ಲಿದ್ದ ಗನ್ ನಿಂದ ಅಕ್ಕನ ಎದೆ ಮತ್ತು ತಲೆ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಘಟನೆ ವೇಳೆ ಯೋಗೇಂದ್ರ ದೆಹಲಿಯಲ್ಲಿದ್ದು, ತಾಯಿ ಮನೆಯಲ್ಲಿದ್ದರು. ಗುಂಡಿನ ಸದ್ದು ಕೇಳಿದ ಸ್ಥಳೀಯರು ದೌಡಾಯಿಸಿ ಆರೋಪಿ ಆಶೀಷ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಕೋಪದಲ್ಲಿ ಅಕ್ಕನನ್ನ ಕೊಲೆ ಮಾಡಿರೋದಕ್ಕೆ ಆರೋಪಿ ಪಶ್ಚಾತ್ತಾಪ ಪಡುತ್ತಿದ್ದು. ತಪ್ಪೊಪ್ಪಿಕೊಂಡಿದ್ದಾನೆ.