– ಈ ಬಾರಿಯೂ 33 ಸ್ಥಾನಗಳಿಗೆ ಅವಿರೋಧ ಆಯ್ಕೆ
ಚಿಕ್ಕೋಡಿ(ಬೆಳಗಾವಿ): ಚುನಾವಣೆ ಘೊಷಣೆ ಆಗ್ತಿದ್ದಂತೆ ಒಂದೇ ಗಲ್ಲಿಯಲ್ಲಿ ಬೆಳೆದ ಗೆಳೆಯರು ಪರಸ್ಪರ ವಿರೋಧಿಗಳಾಗೋದು ಕಾಮನ್. ಕೆಲವೊಂದು ಬಾರಿ ಅಣ್ಣ ತಮ್ಮಂದಿರಲ್ಲಿಯೇ ಕಲಹ ಶುರುವಾಗಿಬಿಡುತ್ತೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಜನ ಕಳೆದ 7 ದಶಕಗಳಿಂದ ಗ್ರಾ.ಪಂ ಚುನಾವಣೆ ಮಾಡಿ ಕೈಗೆ ಶಾಯಿ ಹಾಕಿಕೊಂಡ ಉದಾಹರಣೆಯೇ ಇಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬ್ಯಾಲೇಟ್ ಪೇಪರ್ ನೋಡೆ ಇಲ್ಲ. ಬದಲಾಗಿ ಕತ್ತಿ ಸಹೋದರರು ಗ್ರಾಮದ ಸದಸ್ಯರನ್ನು ಸೇರಿಸಿ ತೆಗೆದುಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬದ್ಧವಾಗಿ ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಗ್ರೂಪ್ ಪಂಚಾಯ್ತಿ, ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. 1977ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ ವಾರ್ಡಿಗೆ ಚುನಾವಣೆ ನಡೆದಿದ್ದು, ಬಿಟ್ಟರೆ ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದಾರೆ.
ಸದ್ಯ ಗ್ರಾಮದ 9 ವಾರ್ಡುಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಸ್ವಗೃಹಕ್ಕೆ ಕರೆಸಿ ಸನ್ಮಾನ ಮಾಡಿ ಗ್ರಾಮದ ಏಳ್ಗೆಗಾಗಿ ಶ್ರಮಿಸುವಂತೆ ಮನವಿ ಮಾಡಿದರು. ಅವಿರೋಧ ಆಯ್ಕೆಯಾದ ಸದಸ್ಯರು ಮಾತನಾಡಿ ಕತ್ತಿ ಸಹೋದರರ ಪ್ರಯತ್ನದಿಂದ ಅವಿರೋಧ ಆಯ್ಕೆ ಆಗಿದ್ದು, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.