ಕಾರವಾರ: ವಿಶ್ವ ಅಂಗವಿಕಲರ ದಿನವಾದ ಇಂದು ಪಬ್ಲಿಕ್ ಟಿವಿ ಮತ್ತು ರೋಟರಿ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ ಕಾರ್ಯಕ್ರಮವನ್ನು ಶಿರಸಿಯ ಮಹಾದೇವ ಭಟ್ ಕೋರ್ಸೆ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ಒಟ್ಟು ಎಂಟು ಅಂಗವಿಕಲ ಮಕ್ಕಳಿಗೆ ಪ್ರಥಮ ಹಂತದಲ್ಲಿ ಟ್ಯಾಬ್ ನೀಡಲಾಯಿತು. ಕಿವುಡು ಮತ್ತು ಮೂಕ ಮಕ್ಕಳಿಗಾಗಿಯೇ ಈ ಟ್ಯಾಬ್‍ನಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮಾತು ಮತ್ತು ಕಿವಿ ಕೇಳದಿದ್ದರು ದೃಶ್ಯಗಳನ್ನು ನೋಡುವ ಮೂಲಕ ಈ ಮಕ್ಕಳು ಪಾಠವನ್ನು ಕಲಿಯುವಂತೆ ಈ ಟ್ಯಾಬ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಶಿರಸಿ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಮಹೇಶ್ ತೆಲಾಂಗ, ಶಿರಸಿಯ ಡಿ.ಡಿ.ಪಿ.ಐ ದಿವಾಕರ್ ಶಟ್ಟಿ, ಇನ್ನರ್ ವೀಲ್‍ನ ಪ್ರತಿಮಾ ಭಟ್ ಮುಂತಾದವರು ಉಪಸ್ಥಿತರಿದ್ದರು. ಟ್ಯಾಬ್ ಪಡೆದ ಅಂಗವಿಕಲ ಮಕ್ಕಳು ತಮ್ಮದೇ ಭಾಷೆಯಲ್ಲಿ ದಾನಿಗಳಿಗೆ ಧನ್ಯವಾದ ಅರ್ಪಿಸುವ ಜೊತೆಗೆ ಹರ್ಷ ವ್ಯಕ್ತಪಡಿಸಿದರು.