ಕೊಪ್ಪಳ: ಮಣ್ಣಿನ ಮಡಿಕೆಯಲ್ಲಿ ಮಾಡಿದ ಅಡುಗೆ ಊಟ ಮಾಡಿದ್ರೆ ಅದರ ರುಚಿ ಹೆಚ್ಚು ಅನ್ನೋ ಮಾತನ್ನ ನಾವು ಕೇಳಿದ್ದೇವೆ. ಆಧುನೀಕರಣ ಹೆಚ್ಚಾದಂತೆ ಮಣ್ಣಿನ ವಸ್ತುಗಳ ಬಳಕೆ ಕಡಿಮೆಯಾಗಿತ್ತು. ಆದರೆ ಜನ ನಿಧಾನಗತಿಯಲ್ಲಿ ಮತ್ತೆ ಇದೀಗ ಮಣ್ಣಿನ ವಸ್ತುಗಳತ್ತ ಮುಖ ಮಾಡುತ್ತಿದ್ದಾರೆ.
ಹೌದು. ಓಲ್ಡ್ ಈಸ್ ಗೋಲ್ಡ್ ಪದೇ ಪದೇ ಪ್ರೂವ್ ಆಗ್ತಾನೆ ಇರುತ್ತೆ. ಈಗ ಕೊಪ್ಪಳದಲ್ಲೂ ಮತ್ತೆ ಆ ಮಾತು ಸತ್ಯವಾಗಿದೆ. ಮಣ್ಣಿನಿಂದ ತಯಾರಾಗಿರುವ ಕುಕ್ಕರ್, ಇಡ್ಲಿ ಪಾತ್ರೆ, ನೀರಿನ ಜಗ್ ಹೀಗೆ ಹಲವು ವಸ್ತುಗಳು ಕೊಪ್ಪಳ ನಗರದಲ್ಲಿರೋ ಮಣ್ಣಿನ ಗೃಹೋಪಯೋಗಿ ವಸ್ತುಗಳ ಅಂಗಡಿಯಲ್ಲಿ ಕಂಡುಬಂದವು. ಮಣ್ಣಿನಿಂದ ತಯಾರಿಸಿರುವ ಈ ವಸ್ತುಗಳು ಈಗ ಹೊಸ ಟ್ರೆಂಡ್ ಅನ್ನೇ ಸೃಷ್ಠಿಸಿವೆ.
ಇಷ್ಟು ದಿನ ಸ್ಟೀಲ್, ಅಲ್ಯೂಮೀನಿಯಂ ವಸ್ತುಗಳನ್ನು ಬಳಸುತ್ತಿದ್ದ ಜನ ಈಗ ಮಣ್ಣಿನಿಂದ ಮಾಡಿದ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಈ ಶಾಪ್‍ನ ಮಾಲೀಕರಾದ ನಾಗರಾಜ್ ಮೂಲತಃ ಕುಂಬಾರಿಕೆ ಮಾಡ್ತಿದ್ದವರು, ಇಷ್ಟು ದಿನ ಮಡಿಕೆ, ಹಣತೆ ಮಾರಾಟ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಮಣ್ಣಿನ ವಸ್ತುಗಳಿಗೆ ಬೇಡಿಕೆ ಬಂದಂತೆ, ಗೃಹ ಉಪಯೋಗಿ ವಸ್ತುಗಳ ಅಂಗಡಿ ತೆರೆದಿದ್ದಾರೆ.
ಹಿಂದಿನ ಕಾಲದಲ್ಲಿ ಹಿರಿಯರು ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ, ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳುತ್ತಿದ್ದರು. ಅದೇ ಕಾರಣಕ್ಕೆ ಗ್ರಾಹಕರು ಮಣ್ಣಿನ ಪರಿಕರ ಕೊಂಡುಕೊಳ್ಳಲು ಬರ್ತಿದ್ದಾರೆ. ಇಲ್ಲಿ ಮಣ್ಣಿನಿಂದ ಮಾಡಿದ ಕುಕ್ಕರ್, ಇಡ್ಲಿ ಪಾತ್ರೆ, ಪಡ್ಡಿಣ ಮಣೆ, ರೊಟ್ಟಿ ತವಾ, ನೀರಿನ ಜಗ್ ವಾಟರ್ ಬಾಟಲ್, ಚಹಾ ಕಪ್, ಊಟದ ತಟ್ಟೆ, ವೈನ್ ಗ್ಲಾಸ್ ಹೀಗೆ ತರಹೇವಾರಿ ಐಟಮ್‍ಗಳು ಲಭ್ಯವಿದೆ.
ಗೃಹ ಉಪಯೋಗಿ ವಸ್ತುಗಳಲ್ಲದೆ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ, ಗಂಟೆಗಳು ನೋಡುಗರನ್ನ ಸೆಳೆಯುತ್ತಿವೆ. ಸದ್ಯ ಭಾರತೀಯ ರೈಲ್ವೇ ಇಲಾಖೆಯೂ ಪ್ರತೀ ರೈಲ್ವೇ ನಿಲ್ದಾಣಗಳಲ್ಲಿ ಮಣ್ಣಿನಿಂದ ಮಾಡಿದ ಕಪ್‍ಗಳನ್ನು ಬಳಸುವಂತೆ ಸೂಚನೆ ನೀಡಿರುವುದೂ ಹೊಸ ಟ್ರೆಂಡ್‍ಗೆ ನಾಂದಿ ಹಾಡಿದಂತಾಗಿದೆ.