ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹಸುವೊಂದು ನಳಿನ್ ಕುಮಾರ್ ಕಟೀಲ್ ಕೈಗೆ ಕಚ್ಚಿದೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆಗಳನ್ನು ಆರಂಭಿಸಿದೆ. 31 ಜಿಲ್ಲೆಗಳಲ್ಲಿ 62 ಸಮಾವೇಶಗಳನ್ನು ನಡೆಸಲು ಪಕ್ಷ ನಿರ್ಧರಿಸಿದೆ. ಉಡುಪಿ ಕೃಷ್ಣಮಠದಲ್ಲಿ ಗೋವು ಪೂಜೆ ನಡೆಸುವ ಮೂಲಕ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಲಾಯ್ತು.
ಮಠದ ಗೋಶಾಲೆಗೆ ತೆರಳಿದ ಬಿಜೆಪಿ ನಾಯಕರು ಗೋವುಗಳಿಗೆ ಪೂಜೆ ಸಲ್ಲಿಸಿದರು ಹಾರ, ಶಾಲು ಸಲ್ಲಿಸಿದರು. ಗೋವಿಗೆ ಬಾಳೆಹಣ್ಣು ತಿನ್ನಿಸಿದ ನಳಿನ್ ಕುಮಾರ್ ಕಟೀಲ್ ಅವರ ಕೈಯನ್ನು ಹಸು ಕಚ್ಚಿದ ಘಟನೆ ನಡೆಯಿತು. ಒಮ್ಮೆ ನೋವಾದರೂ ನಗುತ್ತ ಮುಂದಕ್ಕೆ ಸಾಗಿದ ಕಟೀಲ್ ಹತ್ತಾರು ಗೋವುಗಳಿಗೆ ಹಣ್ಣು ನೀಡಿದರು. ಕುಂದಾಪುರದಲ್ಲಿ ಮತ್ತು ಉಡುಪಿಯಲ್ಲಿ ಇಂದು ಎರಡು ಸಮಾವೇಶಗಳು ನಡೆಯಲಿದೆ.
ಡಿಸಿಎಂ ಅಶ್ವತ್ಥನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ ಮೊದಲು ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗೌರವ ಸಲ್ಲಿಕೆ ಮಾಡಿದರು. ನಂತರ ಕೆಲ ಕಾಲ ಮಾತುಕತೆ ನಡೆಸಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.