ಬೆಟ್ಟ ಕರಗಿಸಿ, ಲೇಔಟ್ ನಿರ್ಮಾಣ – ಬಂಡೆಗಳ ಸ್ಫೋಟಕ್ಕೆ ಬೆದರಿದ ನಿವಾಸಿಗಳು

Public TV
2 Min Read
RCR Betta

– ಹಸಿರು ವಲಯವನ್ನ ವಸತಿ ಯೋಜನೆಗೆ ಅಕ್ರಮ ಬಳಕೆ

ರಾಯಚೂರು: ನಗರದಲ್ಲಿ ಪ್ರಕೃತಿದತ್ತವಾದ ಬೆಟ್ಟವನ್ನ ಒಡೆದು ಲೇಔಟ್ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. ದೊಡ್ಡ ದೊಡ್ಡ ಬಂಡೆಗಳ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಗ್ರೀನ್ ಝೋನ್ ನಲ್ಲಿರುವ ಬೆಟ್ಟವನ್ನು ಹಗಲು ರಾತ್ರಿ ನಿರಂತರ ನೆಲಸಮ ಮಾಡಲಾಗುತ್ತಿದೆ ಅಂತ ನಿವಾಸಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.

RCR Betta 3

ನಗರದ ಮಧ್ಯದಲ್ಲೇ ಇರುವ ಇಲ್ಲಿನ ವಿದ್ಯಾನಗರ, ಸಾವಿತ್ರಿ ಕಾಲೋನಿ, ಲಕ್ಷ್ಮಿಪುರಂ ಲೇಔಟ್‍ಗೆ ಹೊಂದಿಕೊಂಡಿರುವ ಬೆಟ್ಟವನ್ನ ನಿರಂತರವಾಗಿ ಸ್ಫೋಟಿಸಲಾಗುತ್ತಿದೆ. ರಾಯಚೂರು ನಗರದ ಮಾಸ್ಟರ್ ಪ್ಲಾನ್ ಪ್ರಕಾರ ಗ್ರೀನ್ ಝೋನ್ ನಲ್ಲಿರುವ ಗುಡ್ಡವನ್ನ ವಸತಿ ಯೋಜನೆಗೆ ಮಾರ್ಪಾಡು ಮಾಡಲಾಗುತ್ತಿದೆ. ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದ್ದು ಈ ಗುಡ್ಡ ಸ್ಫೋಟದಿಂದ ಮನೆಗಳು ಕಂಪಿಸುತ್ತಿವೆ ಅಂತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RCR Betta 4

ಸರ್ವೆ ನಂ.886. ಹಾಗೂ 882/2 ರಲ್ಲಿ ಬರುವ ಈ ಬೆಟ್ಟ ಮಾಣಿಕ್ ಪ್ರಭು ಸಂಸ್ಥಾನಕ್ಕೆ ಸೇರಿದ್ದು ಬಿಲ್ಡರ್ ಗಳಿಗೆ ಗುಡ್ಡವನ್ನ ಒಡೆದು ಲೇಔಟ್ ನಿರ್ಮಿಸಲು ಗುತ್ತಿಗೆ ನೀಡಲಾಗಿದೆ. ಬಿಲ್ಡರ್ ಗಳು ಗುಡ್ಡದಲ್ಲಿನ ದೊಡ್ಡ ಬಂಡೆಗಳನ್ನ ನಿಯಮಬಾಹಿರವಾಗಿ ಸ್ಫೋಟಿಸುತ್ತಿದ್ದಾರೆ. ಹೀಗಾಗಿ ಧೂಳು, ಶಬ್ದ ಮಾಲಿನ್ಯ ಜೊತೆಗೆ ಸುತ್ತಮುತ್ತಲಿನ ಮನೆಗಳು ಕಂಪಿಸುತ್ತಿದ್ದು ಮನೆಯ ಕಿಟಕಿ ಗಾಜುಗಳು ಸಹ ಒಡೆದಿವೆ. ಹೆಚ್ಚಾಗಿ ಹಿರಿಯ ನಾಗರೀಕರೇ ಇರುವ ಇಲ್ಲಿನ ವಸತಿ ಪ್ರದೇಶದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿ ಅಸ್ತಮಾ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಧೂಳು ಹೆಚ್ಚಾಗಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ಬೆಟ್ಟ ಕರಗಿಸಿ ಲೇಔಟ್ ನಿರ್ಮಿಸಲು ಮುಂದಾಗಿರುವುದನ್ನ ಕೂಡಲೇ ನಿಲ್ಲಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

RCR Betta 5

ಪ್ರತೀ ನಿತ್ಯ ಗುಡ್ಡವನ್ನ ಒಡೆಯುತ್ತಿರುವುದಕ್ಕೆ ಜನ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಮಾಣಿಕ್ ಪ್ರಭು ಟ್ರಸ್ಟ್ ಗೆ ಸಾಮಾಜಿಕ ಚಟುವಟಿಕೆಗಳಿಗೆ ನೀಡಲಾಗಿರುವ ಬೆಟ್ಟದ ಜಾಗವನ್ನ ಲೇಔಟ್ ಮಾಡಲಾಗುತ್ತಿದೆ. ಇದರಿಂದ ನಿಯಮಗಳ ಉಲ್ಲಂಘನೆ ಒಂದೆಡೆಯಾದರೆ ಪ್ರಕೃತಿ ಸಂಪತ್ತು ಹಾಳಾಗುತ್ತಿದೆ ಅನ್ನೋದು ನಿವಾಸಿಗಳ ಅಳಲು. ಈಗಾಗಲೇ ಇಲ್ಲಿನ ಹಿರಿಯ ನಾಗರೀಕರು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೇವಲ ಪರಿಶೀಲನೆ ಮಾಡಿ ಸುಮ್ಮನಾಗುತ್ತಿದ್ದಾರೆ. ವಸತಿ ಪ್ರದೇಶದಲ್ಲಿ ಬಂಡೆಗಳ ಸ್ಫೋಟ ನಿಷಿದ್ಧವಿದ್ದು ಕ್ರಮ ಕೈಗೊಳ್ಳಬೇಕು ಅಂತ ಜನ ಒತ್ತಾಯಿಸಿದ್ದಾರೆ.

RCR Betta 1

ಲೇಔಟ್ ನಿರ್ಮಾಣಕ್ಕಾಗಿ ರಾಯಚೂರು ನಗರಕ್ಕೆ ಕಳಶಪ್ರಾಯವಾಗಿದ್ದ ಬೆಟ್ಟ ಕರಗುತ್ತಿದೆ. ಒಂದೆಡೆ ನಿಯಮಬಾಹಿರವಾಗಿ ಪ್ರಕೃತಿ ಹಾಳಾಗುತ್ತಿದ್ದರೆ ಇನ್ನೊಂದೆಡೆ ನಿವಾಸಿಗಳು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಕಾನೂನು ಕ್ರಮ ಜರುಗಿಸಬೇಕಿದೆ. ಗ್ರೀನ್ ಝೋನ್‍ನಲ್ಲಿರುವ ಬೆಟ್ಟವನ್ನ ಉಳಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *