ಬಾಗಲಕೋಟೆ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನರೆನೂರು ಗ್ರಾಮದಲ್ಲಿ ನಡೆದಿದೆ.
ಯಲ್ಲವ್ವ ಪೂಜಾರ(24) ಕೊಲೆಯಾದ ಮಹಿಳೆ. ರಮೇಶ್ ಪೂಜಾರ ಕೊಲೆಗೈದ ಆರೋಪಿ ಗಂಡ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ.
ಪದೇ ಪದೇ ಕುಡಿದು ಮನೆಗೆ ಬರುತ್ತಿದ್ದ ರಮೇಶ್, ಪತ್ನಿ ಜೊತೆ ಅನೈತಿಕ ಸಂಬಂಧ ಶಂಕಿಸಿ ಜಗಳ ಮಾಡುತ್ತಿದ್ದನು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಸ್ಥಳೀಯರು ಮಾತನಾಡುತ್ತಿದ್ದರಿಂದ ಬೇಸರಗೊಂಡ ಪತಿ ನಿನ್ನೆ ರಾತ್ರಿಯೂ ಕಂಠಪೂರ್ತಿ ಕುಡಿದು ಬಂದು ಪತ್ನಿಯ ಜೊತೆ ಜಗಳವಾಡಿದ್ದಾನೆ.
ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಲ್ಲೇ ಇದ್ದ ಕೊಡಲಿ ತೆಗೆದು ಪತ್ನಿಯ ತಲೆಗೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಆಕೆಯ ತಲೆಯಲ್ಲೇ ಕೊಡಲಿ ಉಳಿದುಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೊಡಲಿಯನ್ನು ತಲೆಯಿಂದ ತೆಗೆಯಲು ಸಾಧ್ಯವಾಗದೆ ಗಂಭೀರ ಗಾಯಗೊಂಡಿದ್ದ ಯಲ್ಲವ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕೆರೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.