ರವಿ ಬೆಳಗೆರೆ ಅಸ್ತಂಗತ – ಒಡನಾಟ ಹಂಚಿಕೊಂಡ ಆಪ್ತರು

Public TV
2 Min Read
sanath ravi

ಬೆಂಗಳೂರು: ರವಿ ಬೆಳಗೆರೆ ನನ್ನ ನಾಲ್ಕು ದಶಕಗಳ ಸ್ನೇಹಿತ, ಸಂಗಾತಿ, ಜೀವದ ಗೆಳೆಯ. ಎಂಬತ್ತರ ದಶಕದಲ್ಲಿ ಆತ ಧಾರವಾಡ ವಿವಿಯಲ್ಲಿ ಓದುತ್ತಿದ್ದ. ಆತನ ಸಹಪಾಠಿ ನನ್ನ ಚಳವಳಿಯ ಒಡನಾಡಿ ಅಶೋಕ ಶೆಟ್ಟರ್ ಮೂಲಕ ಪರಿಚಯ. ಪರಿಚಯ ಕ್ರಮೇಣ ಸ್ನೇಹವಾಯಿತು. ಮುಂದೆ ಆತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿಯಾದಾಗ ಬಾಂಧವ್ಯ ಇನ್ನಷ್ಟು ನಿಕಟವಾಯಿತು. ರವಿ, ನಾನು, ಜಿ.ಎಚ್.ರಾಘವೇಂದ್ರ ಎಷ್ಟೋ ಸಂಜೆಗಳನ್ನು ನಮ್ಮದೇ ಲೋಕದಲ್ಲಿ ಕಳೆದೆವು. ದಿನಗಟ್ಟಲೇ ಮಾತಾಡಿದೆವು. ನನ್ನ ಬರಹ ಇಷ್ಟ ಪಡುತ್ತಿದ್ದ ಆತ ನನ್ನಿಂದ ಬರೆಸಿದ ಎಂದು ರವಿ ಬೆಳೆಗೆರೆ ಬಗ್ಗೆ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಹೇಳಿದ್ದಾರೆ.

111

ಬಳ್ಳಾರಿಯ ರವಿ ಧಾರವಾಡಕ್ಕೆ ಓದಲು ಬಂದು ಅಶೋಕ ಶೆಟ್ಟರ ಸ್ನೇಹ ದಿಂದ ಎಡಪಂಥೀಯನಾಗಿ ಬದಲಾದ. ಜೀವನದಲ್ಲಿ ತುಂಬ ಕಷ್ಟ ಪಟ್ಟು ಬರಿಗೈಲಿ ಬೆಂಗಳೂರಿಗೆ ಬಂದು ಸಾಕಷ್ಟು ಬೆಳೆದ. ಹಾಯ್ ಬೆಂಗಳೂರು ಪತ್ರಿಕೆ ಮಾತ್ರವಲ್ಲ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ. ಇಷ್ಟೆಲ್ಲ ಬೆಳೆದರು ನನ್ನಂಥ ಹಳೆಯ ಗೆಳೆಯರನ್ನು ರವಿ ಮರೆತಿರಲಿಲ್ಲ. ನೆನಪಾದಾಗಲೆಲ್ಲ ಗುರುವೇ ಬಾ ಎಂದು ಕರೆದು ತಾಸುಗಟ್ಟಲೇ ಮಾತಾಡುತ್ತಿದ್ದ. ಫೋನ್ ನಲ್ಲಿ ಆರೋಗ್ಯ ವಿಚಾರಿಸುತ್ತಿದ್ದ. ‘ಇವರು ಮಾಕ್ರ್ಸ್ ವಾದ ಕಲಿಸಿದ ಗುರು’ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದ. ಆತ ‘ಹಾಯ್ ಬೆಂಗಳೂರು’ ನಲ್ಲಿ ಬರೆದದ್ದು ತಪ್ಪೆಂದು ಹೇಳಿದರೆ ಒಪ್ಪಿಕೊಳ್ಳುತ್ತಿದ್ದ ಎಂದಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಟು ಬೆಂಗಳೂರು – ರವಿ ಬೆಳಗೆರೆ ಜೀವನ ಪಯಣ ಹೇಗಿತ್ತು..?

sanath

ಜಾತಿ-ಮತ ಮೀರಿದ ಮನುಷ್ಯ ಪ್ರೇಮಿ ಆತ. ಹಿಂದು ಹುಡುಗಿಯೊಬ್ಬಳು ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮದುವೆಯಾದಾಗ ಆಕೆಯ ಬೆಂಗಾವಲಿಗೆ ನಿಂತ. ಎಲ್ಲಕ್ಕಿಂತ ಮಿಗಿಲಾಗಿ ದೈತ್ಯ ಬರಹಗಾರ. ಓದಿಸಿಕೊಂಡು ಹೋಗುವ ಶೈಲಿ ಆತನದ್ದು. ನಾನು ತುಂಬಾ ಕಷ್ಟದಲ್ಲಿದ್ದಾಗ ಧೈರ್ಯ ಹೆಳಿ ನೆರವಿಗೆ ಬಂದ ರವಿಯನ್ನು ಹೇಗೆ ಮರೆಯಲಿ ಎಂದು ಅಂಕಣಕಾರ ಸನತ್ ಕುಮಾರ್ ಬೆಳಗಲಿ ಮೆಲುಕು ಹಾಕಿಕೊಂಡರು. ಇದನ್ನೂ ಓದಿ:  ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

saraju

ಅವನು ಕವಿವಿದಲ್ಲಿ ನನಗಿಂತ ಒಂದು ವರ್ಷ ಜ್ಯೂನಿಯರ್. ಆಗಲೇ ಆತ ಅನೇಕ ವಿಷಯಗಳ ರಹಸ್ಯದ ಮೊಟ್ಟೆಯಾಗಿದ್ದ. ಅನೇಕ ಸಲ ಅವನ ಬಗ್ಗೆ ನನಗೆ ವಿಸ್ಮಯ ಅನ್ನಿಸುತ್ತಿತ್ತು. ನಾನು ಸಂ.ಕ ಬಿಟ್ಟು ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಕನ್ನಡಪ್ರಭಕ್ಕೆ ಬಂದಾಗ ಆತ ಸಂ.ಕ ಸೇರಿದ. ಇಪ್ಪತ್ತು ದಿನಗಳ ಹಿಂದಷ್ಟೇ ಮಾತಾಡಿದ್ದ ಎಂದು ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ಸಂತಾಪ ಸೂಚಿಸಿದರು. ಇದನ್ನೂ ಓದಿ: ಖ್ಯಾತ ಬರಹಗಾರ, ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

leela

ಯಾರೂ ಮರೆಯಲಾರದ ಪತ್ರಕರ್ತ ರವಿಯವರು. ಜಯಕುಮಾರ್, ಆರಾಧ್ಯ ಸಂಯುಕ್ತ ಕರ್ನಾಟಕದಲ್ಲಿದ್ದಾಗ ಅದೊಂದು ದಿನ ಅಲ್ಲಿಗೇ ಹೋದೆ. ಸೆಕ್ಸ್ ವರ್ಕರ್ಸ್ ಮಧ್ಯೆ ಕೆಲಸ ಮಾಡುವ ಅವಕಾಶ ಬಂದಿದೆ ಎಂದಾಗ, ಎಲ್ಲರಿಗಿಂತಲೂ ಮೊದಲು ನನಗೆ ಧೈರ್ಯ ಹೇಳಿ, ಜರ್ನಲಿಸಂ ಯಾರಾದ್ರೂ ಮಾಡಬಹುದು, ಈ ಅವಕಾಶ ಕಳೆದುಕೊಳ್ಳಬೇಡ ಅಂತ ಮುನ್ನುಗ್ಗಲು ಕಲಿಸಿದವರು. ಡಿ ಫೀಲ್ಡ್ ನಲ್ಲಿ ನನ್ನ ತಾಕಕಾಟಗಳನ್ನು ಸದಾ ಹಂಚಿಕೊಳ್ಳುತ್ತಿದ್ದೆ, ಹಾಯ್ ಜೊತೆಯಲ್ಲಿ ಆರಂಭದಿಂದಲೂ ಇದ್ದೆ. ಹಾಯ್ ನಲ್ಲಿ ಅಂಕಣವನ್ನೂ ಬರೆದೆ. ಅವರಿಗಿದ್ದ ಸಾವಿರಾರು ಅತಿ ಆತ್ಮೀಯ ಕುಟುಂಬಗಳಲ್ಲಿ ನಮ್ಮದೂ ಕೂಡ. ಹೇಗೆ ಮರೆಯುವುದು..? ಅವರಿಗೆ ಅಂತಿಮ ನಮನಗಳು.. ???? ಅವೆಷ್ಟು ನೆನಪುಗಳ ಸಾಲು..! ಎಂದು ಲೇಖಕಿ ಲೀಲಾ ಸಂಪಿಗೆ ಸಂತಾಪ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *