– ಮಂಡ್ಯ ನನ್ನ ಕರ್ಮ ಭೂಮಿ, ನನ್ನ ಮೊದಲ ಆಯ್ಕೆ ಪಕ್ಷ ನಂತ್ರ ಸಿನಿಮಾ
ಮಂಡ್ಯ: ಅಭಿಮಾನಿಗಳು, ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ, ಗೌರವ ಇಟ್ಟಿದ್ದಾರೆ. ನನ್ನ ಕೊನೆ ಉಸಿರಿನವರೆಗೂ ಅವರಿಗಾಗಿ ಹೋರಾಟ ಮಾಡ್ತೀನಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ನಿಖಿಲ್ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು. ಮತ್ತೊಮ್ಮೆ ರೈತರ ಆತ್ಮಹತ್ಯೆ ದಿನನಿತ್ಯ ನಡೆಯುತ್ತಿದೆ. ಇದು ನಿಲ್ಲಬೇಕು ಎಂದು ಹೇಳಿದರು.
ನಂಜೇಗೌಡರು ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡ್ಡಿ ಕಟ್ಟಲಾಗದೆ, ಬೆಳೆಗೆ ಸರಿಯಾದ ಬೆಲೆ ಸಿಗದೇ ಇವತ್ತು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಸಾಲ ಮಾಡದ ರೀತಿ ಕಾರ್ಯಕ್ರಮ ಮಾಡೋದು ಕುಮಾರಣ್ಣನ ಕನಸಾಗಿತ್ತು. ಸಾಂತ್ವನ ಹೇಳಿ ನಾವು ಹೋಗಬಹುದು, ಆದರೆ ಸರ್ಕಾರ ರೈತರ ಆತ್ಮಹತ್ಯೆ ನಿಲ್ಲಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ರೈತನ ಮನೆಗೆ ಸಚಿವರು ಬಂದು ಹೋದ ವಿಚಾರವಾಗಿ ಮಾತನಾಡಿದ ನಿಖಿಲ್ ಅವರು, ನಾನು ಬರುತ್ತೇನೆ ಎಂದು ತಿಳಿದು ರೈತನ ಮನೆಗೆ ಭೇಟಿ ಕೊಟ್ಟರಲ್ಲ ಅದು ಸಂತೋಷದ ವಿಚಾರ. ನಾನು ಬಂದಿಲ್ಲ ಅಂದರೆ ಸಚಿವರು ಬರುತ್ತಿರಲಿಲ್ಲವೇನೊ ಎಂದು ಹೇಳಿದರು.
ರಾಮನಗರ ಜನತೆ ನನ್ನ ತಂದೆಯನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಅವರಿಗೆ ಆಸೆ ನಿಖಿಲ್ ಇಲ್ಲಿಗೂ ಬರಲಿ ಎಂದು. ನಾನು ಎಲ್ಲಾ ಕಡೆ ಒಡಾಡುತ್ತೇನೆ ಎಂದರು. ನಂತರ ಮುಂದಿನ ಎಂಪಿ ನಿಖಿಲ್ ಎಂಬ ಅಭಿಮಾನಿಗಳ ಘೋಷಣೆ ವಿಚಾರವಾಗಿ ಮಾತನಾಡಿ, ಅಭಿಮಾನಿಗಳು, ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ, ಗೌರವ ಇಟ್ಟಿದ್ದಾರೆ. ನನ್ನ ಕೊನೆ ಉಸಿರಿನವರೆಗೂ ಅವರಿಗಾಗಿ ಹೋರಾಟ ಮಾಡುತ್ತೇನೆ. ಮಂದೇನು ನನ್ನ ಕರ್ಮ ಭೂಮಿ ಮಂಡ್ಯನೇ, ನನ್ನ ಆಯ್ಕೆ ಮಂಡ್ಯನೆ. ಸೋಲು ಗೆಲುವು ರಾಜಕಾರಣದಲ್ಲಿ ಸಹಜ. ಹಾಗಾಂತ ಯಾವ ರಾಜಕಾರಣಿಗಳು ಮನೆಯಲ್ಲಿ ಕೂರಲ್ಲ ಎಂದು ತಿಳಿಸಿದರು.
ಜನರ ಜೊತೆಯಲ್ಲಿ ನಾವಿರುತ್ತೇವೆ ಜನ ನಮ್ಮ ಒಪ್ಪಿಕೊಳ್ಳುತ್ತಾರೆ ಎಂಬ ನನಗೆ ವಿಶ್ವಾಸವಿದೆ. ನನ್ನ ಮೊದಲ ಆಯ್ಕೆ ಪಕ್ಷ ನಂತರ ಸಿನಿಮಾ. ಮೊದಲು ನನ್ನ ಪಕ್ಷ ಕೊಟ್ಟ ಜವಾಬ್ದಾರಿ ಕಡೆಗೆ ನಾನು ಗಮನಹರಿಸುತ್ತೇನೆ ಎಂದು ಹೇಳಿದರು.