ಕೊನೆಯಲ್ಲಿ ಸತತ ಎರಡು ಬೌಂಡರಿ – ಐಪಿಎಲ್‍ನಿಂದ ಆರ್‌ಸಿಬಿ ಔಟ್

Public TV
3 Min Read
srh vs rcb 1 1

– ಆರಂಭಿಕನಾಗಿ ಬಂದು ಮೊದಲಿಗೆ ಔಟಾದ ಕೊಹ್ಲಿ
– ಬೌಲಿಂಗ್, ಬ್ಯಾಟಿಂಗ್‍ನಲ್ಲಿ ಬೆಂಗಳೂರನ್ನು ಕಾಡಿದ ಹೋಲ್ಡರ್

ಅಬುಧಾಬಿ: ಇಂದು ನಡೆದ ಎಲಿಮಿನೇಟರ್-1 ಪಂದ್ಯದಲ್ಲಿ ಭರ್ಜರಿಯಾಗಿ ಆಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಆರು ವಿಕೆಟ್‍ಗಳಿಂದ ಗೆದ್ದು, ಎಲಿಮಿನೇಟರ್-2ಕ್ಕೆ ಎಂಟ್ರಿ ಕೊಟ್ಟಿದೆ. ಜೊತೆಗೆ ಭಾನುವಾರ ನಡೆಯಲಿರು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಇಂದಿನ ಎಲಿಮಿನೇಟರ್-1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಸನ್ ಹೋಲ್ಡರ್ ಅವರ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯ್ತು. ಆದರೆ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕುಸಿದ  ಆರ್‌ಸಿಬಿಗೆ ಆಸರೆಯಾದರು. ಪರಿಣಾಮ ನಿಗದಿತ 20 ಓವರಿನಲ್ಲಿ 131 ರನ್ ಪೇರಿಸಿತು. ಈ ಗುರಿನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ 2 ಬಾಲ್ ಉಳಿದಂತೆ ಗೆದ್ದು ಬೀಗಿ ಆರ್‌ಸಿಬಿಯನ್ನು ಐಪಿಎಲ್‍ನಿಂದ ಹೊರಗಟ್ಟಿತು.

Kane Williamson holder

ಕೊನೆಯ 18 ಬಾಲಿಗೆ 28 ರನ್‌ಗಳ ಅಗತ್ಯವಿತ್ತು. ನವದೀಪ್‌ ಸೈನಿ ಎಸೆದ 18ನೇ ಓವರಿನಲ್ಲಿ 10 ರನ್‌ ಬಂದರೆ ಸಿರಾಜ್‌ ಎಸೆದ 19ನೇ ಓವರಿನಲ್ಲಿ 9 ರನ್‌ ನೀಡಿದರು. ಕೊನೆಯ 6 ಎಸೆತದಲ್ಲಿ 9 ರನ್‌ ಬೇಕಿತ್ತು. ಸೈನಿ ಎಸೆದ ಮೊದಲ ಎಸೆತದಲ್ಲಿ ವಿಲಿಯಮ್ಸನ್‌ 1 ರನ್‌ ತೆಗೆದರೆ 2ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಹೀಗಾಗಿ ಪಂದ್ಯ ರೋಚಕ ಘಟಕ್ಕೆ ತಿರುಗಿತ್ತು. ಆದರೆ 3 ಮತ್ತು 4ನೇ ಎಸೆತದಲ್ಲಿ ಹೋಲ್ಡರ್‌ ಸತತ 2 ಬೌಂಡರಿ ಹೊಡೆದು ತಂಡಕ್ಕೆ ವಿಜಯವನ್ನು ತಂದುಕೊಟ್ಟರು.

rashid khan

ಐಪಿಎಲ್‍ನಿಂದ ಆರ್‌ಸಿಬಿ ಔಟ್
ಸತತ ನಾಲ್ಕು ಸೋಲಿನ ನಂತರವೂ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್‍ಗೆ ಆಯ್ಕೆಯಾಗಿದ್ದ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಸೋಲಿನ ಮೂಲಕ ಟೂರ್ನಿಯಿಂದ ಹೊರಗೆ ಬಿದ್ದಿದೆ. ಈ ಮೂಲಕ ‘ಈ ಸಲ ಕಪ್ ನಮ್ದೆ’ ಎಂದು ಕಾತುರದಿಂದ ಕಾಯುತ್ತಿದ್ದ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇಂದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‍ನಿಂದ ಆರ್‍ಸಿಬಿ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ.

RCB 1

ವಿಶೇಷ ಏನೆಂದರೆ ಈ ಪಂದ್ಯದಲ್ಲಿ ಕೊಹ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 131 ರನ್‍ಗಳ ಗುರಿಯನ್ನು ಬೆಟ್ಟಲು ಬಂದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಈ ಮೂಲಕ ಆರಂಭಿಕನಾಗಿ ಕಣಕ್ಕಿಳಿದ ಶ್ರೀವಾತ್ಸ್ ಗೋಸ್ವಾಮಿ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. ನಂತರ ಜೊತೆಯಾದ ನಾಯಕ ಡೇವಿಡ್ ವಾರ್ನರ್ ಮತ್ತು ಕನ್ನಡಿಗ ಮನೀಶ್ ಪಾಂಡೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು.

srh 1

ಆದರೆ ಐದನೇ ಓವರ್ ನಾಲ್ಕನೇ ಬಾಲಿನಲ್ಲಿ 17 ಬಾಲಿಗೆ 17 ರನ್ ಸಿಡಿಸಿ ಆಡುತ್ತಿದ್ದ ಡೇವಿಡ್ ವಾರ್ನರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‍ನಲ್ಲಿ ಎಬಿ ಡಿವಿಲಿಯರ್ಸ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಇವರ ನಂತರ 21 ಬಾಲಿಗೆ 24 ರನ್ ಸಿಡಿಸಿ ಸ್ಫೋಟಕವಾಗಿ ಕಾಣುತ್ತಿದ್ದ ಕನ್ನಡಿಗ ಮನೀಶ್ ಪಾಂಡೆಯನ್ನು ಆಡಮ್ ಜಂಪಾ ಅವರು ಔಟ್ ಮಾಡಿದರು. ನಂತರ ಪ್ರಿಯಮ್ ಗರ್ಗ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಚಹಲ್ ಅವರಿಗೆ ಔಟ್ ಆದರು.

ABD

ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇದರ ಜೊತೆಗೆ ತಾಳ್ಮೆಯಿಂದ ಆಡಿಕೊಂಡು ಬಂದ ಕೇನ್ ವಿಲಿಯಮ್ಸನ್ ಅವರು 44 ಬಾಲಿಗೆ ಅರ್ಧಶತಕರ ಸಿಡಿಸಿ ಮಿಂಚಿದರು. ಜೊತೆಗೆ ಇವರಿಗೆ ಉತ್ತಮ ಸಾಥ್ ನೀಡಿದ ಜೇಸನ್ ಹೋಲ್ಡರ್ ಅವರು 20 ಬಾಲಿಗೆ 24 ರನ್ ಸಿಡಿಸಿ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *