– 10 ಲಕ್ಷ ವಂಚಿಸಿದ್ದ ಆರೋಪಿ ಸೆರೆ
ಮೈಸೂರು: ಕಡಿಮೆ ಬೆಲೆಗೆ ಗೋಡಂಬಿ ಮಾರಾಟ ಮಾಡುವ ಆಮಿಷವೊಡ್ಡಿ 10 ಲಕ್ಷ ವಂಚಿಸಿದ್ದ ಆರೋಪಿಯನ್ನು ಮೈಸೂರಿನ ಉದಯಗಿರಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ತಮಿಳುನಾಡಿನ ಪಳನಿಮಲೈ ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಉದಯಗಿರಿಯ ನಿವಾಸಿ ರೋಹನ್ ಖಾನ್ ಎಂಬವರಿಗೆ 10 ಲಕ್ಷ ವಂಚಿಸಿದ್ದ. ಇಂಪೋರ್ಟ್-ಎಕ್ಪೋರ್ಟ್ ವ್ಯವಹಾರ ಮಾಡುತ್ತಿರುವ ರೋಹನ್ ಖಾನ್ ಗೆ ನಾಲ್ಕು ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಆರ್‍ಟಿಜಿಎಸ್ ಮೂಲಕ ಆರೋಪಿ ಪಳನಿ ಮಲೈ ಹಾಗೂ ಪತ್ನಿ ರಾಧಿಕಾ ಪಳನಿ ಮಲೈ 10 ಲಕ್ಷ ರೂ. ಪಡೆದಿದ್ದರು.
ಈ ವಂಚಕ ದಂಪತಿ ತಮಿಳುನಾಡಿನ ಸೇಲಂ ಜಿಲ್ಲೆಯ ಪನೃತ್ತಿ ಪಟ್ಟಣದಲ್ಲಿ ಎಸ್‍ಪಿ ಆರ್ ಎಂಬ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದರು. ಗೋಡಂಬಿಯನ್ನೂ ಕೊಡದೆ ಹಣವನ್ನೂ ಹಿಂದಿರುಗಿಸದೆ ಆರೋಪಿ ತಲೆಮರೆಸಿಕೊಂಡಿದ್ದ. ನಾಲ್ಕು ವರ್ಷಗಳ ಸತತ ಪ್ರಯತ್ನದ ನಂತರ ಉದಯಗಿರಿ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಳನಿ ಮಲೈ ಒಬ್ಬ ಮೋಸಗಾರ ಎಂದು ತಮಿಳುನಾಡಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲೇ ಪಳನಿ ಮಲೈನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.