ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನ – ಬೆಳಗಾವಿ ಗಡಿಯಲ್ಲಿ ಕನ್ನಡ ಮಾಯ

Public TV
1 Min Read
Belgaum Kannada

– ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿಮಯ

ಬೆಳಗಾವಿ/ಚಿಕ್ಕೋಡಿ: ತಿನ್ನಲು ಕರ್ನಾಟಕದ ಅನ್ನ, ಉಸಿರಾಡಲು ಕನ್ನಡದ ಗಾಳಿ, ಕುಡಿಯಲು ಕನ್ನಡದ ನೀರು ಬೇಕು. ಆದರೆ ಕೆಲವರಿಗೆ ಕನ್ನಡ ಭಾಷೆ ಮಾತ್ರ ಬೇಡವಾಗಿದೆ.

ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಡಗರ ಸಂಭ್ರಮ ರಾಜ್ಯದೆಲ್ಲೆಡೆ ಇರುತ್ತದೆ. ಆದರೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಾಜ್ಯೋತ್ಸವ ಸಂಭ್ರಮಾಚರಣೆ ಕೇವಲ ಸರ್ಕಾರದ ಕಾರ್ಯಾಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರಲ್ಲೂ ನಿಪ್ಪಾಣಿ ನಗರ ಹಾಗೂ ನಿಪ್ಪಾಣಿ ತಾಲೂಕಿನ ಬಹುತೇಕ ಕಡೆ ಕನ್ನಡವೇ ಮಾಯವಾಗಿ ಬಿಟ್ಟಿದೆ.

Belgaum Kannada 2

ನಿಪ್ಪಾಣಿ ನಗರ ಸಂಪೂರ್ಣ ಮರಾಠಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಕನ್ನಡ ಭಾಷೆ ತನ್ನ ಪ್ರಭಾವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಈ ನಗರದಲ್ಲಿನ ಬಹುತೇಕ ಅಂಗಡಿಗಳ ಫಲಕಗಳು ಮರಾಠಿಮಯವಾಗಿವೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ನಿಪ್ಪಾಣಿ ನಗರದಲ್ಲಿ ಕನ್ನಡದ ಫಲಕಗಳು ಸಿಗುವುದೇ ಅಪರೂಪ. ಇಲ್ಲಿನ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಇಲ್ಲಿ ಕನ್ನಡವೇ ಮಾಯವಾಗಿದೆ.

Belgaum Kannada 4

ಶೇ.70 ರಷ್ಟು ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಸರ್ಕಾರದ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಲ್ಲಿನ ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿ ಭಾಷೆಯಲ್ಲಿಯೇ ಬರೆಸಲಾಗಿದೆ. ಇಲ್ಲಿನ ಜನಪ್ರತಿನಿಧಿಗಳಂತೂ ಕನ್ನಡ ಭಾಷೆಯನ್ನೇ ಮರೆತು ನಿಪ್ಪಾಣಿ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಶಾಸಕರು ಹಾಗೂ ನಿಪ್ಪಾಣಿ ತಾಲೂಕಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Belgaum Kannada 3

ಅಂಗಡಿಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಪ್ಪಾಣಿ ಚಲೋ ನಡೆಸಿ ಕನ್ನಡದ ನಾಮಫಲಕಗಳನ್ನು ಅಳವಡಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ನಿಪ್ಪಾಣಿ ತಾಲೂಕಾಡಳಿತವೇ ಹೊಣೆಯಾಗಲಿದೆ ಎಂದು ಕರವೇ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *