ಚೀನಾಗೆ ಸಡ್ಡು – ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ ವಿನಿಮಯ ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ

Public TV
1 Min Read
india usa jaishankar and rajnath sing

ನವದೆಹಲಿ: ಗಡಿಯಲ್ಲಿ ಚೀನಾ ಕಿರಿಕ್‌ಗೆ ಭಾರತ ಮತ್ತು ಅಮೆರಿಕ ಸಡ್ಡು ಹೊಡೆದಿವೆ. ಭಾರತ ಮತ್ತು ಅಮೆರಿಕ ಮಧ್ಯೆ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯಕ್ಕೆ ರಕ್ಷಣಾ ಒಪ್ಪಂದ ನಡೆದಿದೆ.

ಉಭಯ ದೇಶಗಳ 2+2 ಮಾತುಕತೆಯಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ(ಬಿಇಸಿಇ), ದ್ವಿಪಕ್ಷೀಯ ರಕ್ಷಣಾ ಮತ್ತು ಮಿಲಿಟರಿ ಸಂಬಂಧ ವೃದ್ಧಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಇಂದು ಮಾತುಕತೆ ನಡೆಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಕಾನೂನುಗಳನ್ನು ಗೌರವಿಸಿ ಮತ್ತು ಅಂತಾರಾಷ್ಟ್ರೀಯ ಸಾಗರಗಳಲ್ಲಿ ನೌಕಾ ಚಟುವಟಿಕೆಗಳಿಗೆ ಸ್ವಾತಂತ್ರ್ಯವನ್ನು ವಿಸ್ತರಿಸಲು, ಪ್ರಾಂತೀಯ ಸಮಗ್ರತೆ, ದೇಶಗಳ ಸಾರ್ವಭೌಮತೆ ಎತ್ತಿಹಿಡಿಯುವುದು ಅಗತ್ಯ. ಇದಕ್ಕೆ ಉಭಯ ದೇಶಗಳು ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮಾತನಾಡಿ, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ಜಾಗತಿಕ ಪ್ರಜಾಪ್ರಭುತ್ವ ಕೂಟಕ್ಕೆ ಬೆದರಿಕೆಯಾಗಿದ್ದು, ಈ ಬೆದರಿಕೆಯನ್ನು ಭಾರತ-ಅಮೆರಿಕ ಜಂಟಿಯಾಗಿ ಎದುರಿಸಲಿದೆ ಎಂದು ಹೇಳಿದರು.

ಲಡಾಖ್ ಗಡಿ ಘರ್ಷಣೆ ವಿಚಾರದಲ್ಲಿ ಭಾರತದ ಜೊತೆ ಅಮೆರಿಕ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ ಅವರು ಚೀನಾದ ದುಷ್ಟ ನೀತಿಗಳನ್ನು ಸೋಲಿಸುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *