ಬೆಂಗಳೂರು: ನಟಿ ಮೇಘನಾ ರಾಜ್ ಹಾಗೂ ಜ್ಯೂನಿಯರ್ ಚಿರು ನೋಡಲು ಮಲಯಾಳಂ ಸ್ಟಾರ್ ದಂಪತಿ ಇಂದು ಆಸ್ಪತ್ರೆಗೆ ಆಗಮಿಸಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಫಹದ್ ಫಾಸಿಲ್ ಮತ್ತು ನಜ್ರಿಯಾ ದಂಪತಿ ಆಸ್ಪತ್ರೆಗೆ ಧಾವಿಸಿ ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಈ ಜೋಡಿ ಕೇರಳದಿಂದ ಕಾರಿನಲ್ಲೇ ಆಗಮಿಸಿದೆ.
ಆಸ್ಪತ್ರೆಯಲ್ಲಿ ಮೇಘನಾ ರಾಜ್ ಮತ್ತು ಮಗು ಆರೋಗ್ಯ ವಿಚಾರಿಸಿದ ಬಳಿಕ ದಂಪತಿ ನಿರ್ದೇಶಕ ಪನ್ನಗಾಭರಣ ಜೊತೆ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ತೆರಳಿ ನಮಸ್ಕರಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಅರ್ಜುನಾ ಸರ್ಜಾ ಅವರ ಕುಟುಂಬ ಮಗುವನ್ನು ನೋಡಲು ಬಂದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅರ್ಜುನ್ ಸರ್ಜಾ, 20 ವರ್ಷದ ಬಳಿಕ ಬಹುಶಃ ನಾನೇ ಚಿರು ಮಗನನ್ನು ಲಾಂಚ್ ಮಾಡುತ್ತೇನೆ. ಸೀಮಂತದ ಸಮಯದಲ್ಲಿ ಹಾಟ್ರ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದರು.
ಚಿರು ಅಗಲಿಕೆ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವಾಗಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ. ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದು ಗದ್ಗದಿತರಾದರು. 36 ವರ್ಷದ ಹಿಂದೆ ಶೂಟಿಂಗ್ ನಿಲ್ಲಿಸಿ ಚಿರು ನೋಡಲು ಬೆಂಗಳೂರಿಗೆ ಬಂದಿದ್ದೆ. ಈಗ ಅವನ ಮಗನನ್ನ ನೋಡಲು ಬಂದಿದ್ದೇನೆ ಎಂದು ಅರ್ಜುನ್ ಸರ್ಜಾ ಖುಷಿ ಹಂಚಿಕೊಂಡಿದ್ದರು.