ಹಬ್ಬದ ವೇಳೆ ಸೈನಿಕರನ್ನು ನೆನೆದು ಅವರಿಗಾಗಿ ದೀಪ ಬೆಳಗಿಸಿ: ಪ್ರಧಾನಿ ಮೋದಿ

Public TV
3 Min Read
pm modi

ನವದೆಹಲಿ: ಕೆಚ್ಚೆದೆಯ ಸೈನಿಕರು ಹಾಗೂ ಭದ್ರತಾ ಪಡೆಗಳೊಂದಿಗೆ ಭಾರತ ಯಾವಾಗಲೂ ಇರುತ್ತದೆ. ಕೊರೊನಾ ಸಮಯದಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಸೈನಿಕರಿಗಾಗಿ ದೀಪ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನಿಡಿದ್ದಾರೆ.

ಮನ್ ಕೀ ಬಾತ್‍ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದಸರಾ ಹಬ್ಬದ ಶುಭಾಶಯ ತಿಳಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ಸೈನಿಕರು ತಮ್ಮ ಕುಟುಂಬಗಳನ್ನು ಬಿಟ್ಟು ದೇಶ ಸೇವೆ ಮಾಡುತ್ತಿದ್ದಾರೆ. ವಿದೇಶಗಳ ಬೆದರಿಕೆಗಳಿಂದ ದೇಶವನ್ನು ಕಾಯುವ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ಅವರನ್ನು ನೆನೆದು ಹಬ್ಬದ ಸಂದರ್ಭದಲ್ಲಿ ದೀಪವನ್ನು ಬೆಳಗಿಸಿ ಎಂದು ಕರೆ ನೀಡಿದರು.

ಈದ್, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಈ ಸಂದರ್ಭದಲ್ಲಿ ಬರುತ್ತವೆ. ಈ ಹಬ್ಬಗಳ ಸಂದರ್ಭದಲ್ಲಿ ಗಡಿ ಕಾಯುತ್ತಿರುವ ಸೈನಿಕರನ್ನು ಸಹ ನಾವು ನೆನೆಯಬೇಕಿದೆ. ಅವರಿಗಾಗಿ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ತಾಯಿ ಭಾರತಿಯ ವೀರ ಪುತ್ರರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಚೀನಾದ ಸುಮಾರು 3,500 ಕಿ.ಮೀ ಉದ್ದದ ಗಡಿಯಲ್ಲಿ ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ಗಮನಾರ್ಹ ರೀತಿಯಲ್ಲಿ ಬಲಪಡಿಸಲಾಗಿದೆ. ಲಡಾಖ್‍ನಲ್ಲಿ ಉದ್ವಿಗ್ನತೆ ಸರಾಗಗೊಳ್ಳುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ಹಲವು ಹಂತದ ಉನ್ನತ ಮಟ್ಟದ ಮಾತುಕತೆ ನಡೆದರೂ ಫಲಕಾರಿಯಾಗಿಲ್ಲ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಹಬ್ಬಗಳನ್ನು ಸಂಯಮದಿಂದ ಆಚರಿಸಿ, ಶಾಪಿಂಗ್ ಮಾಡುವಾಗ ವೋಕಲ್ ಫಾರ್ ಲೋಕಲ್ ಮಂತ್ರ ಜಪಿಸಿ, ಸ್ಥಳೀಯ ವ್ಯಾಪಾರಿಗಳೊಂದಿಗೆ ಖರೀದಿಸುವ ಸಂಕಲ್ಪ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಕೊರೊನಾ ವೇಳೆ ಹಬ್ಬಗಳನ್ನು ಎಚ್ಚರದಿಂದ ಆಚರಿಸಿ, ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *