ಮಳೆ ಹಾನಿ ಪ್ರದೇಶಗಳಿಗೆ ಅಶೋಕ್ ಭೇಟಿ- ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ

Public TV
2 Min Read
BBMP

– ಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ

ಬೆಂಗಳೂರು: ನಿನ್ನೆ ಒಂದೇ ದಿನ ಮಳೆಗೆ ಬೆಂಗಳೂರು ಮುಳುಗಿದೆ. ಮಳೆಯಿಂದ ಹಾನಿಗೊಳಗಾದ ಹೊಸಕೆರೆ ಹಳ್ಳಿ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳು ಸಚಿವರಿಂದ ದೂರ ಉಳಿದು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

R Ashok

ಸಚಿವರ ಭೇಟಿ ವೇಳೆ ಸ್ಥಳಕ್ಕೆ ಆಗಮಿಸಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಬೇಜಾವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳಾಗಿದ್ದು, ದೂರದಲ್ಲಿ ನಿಂತ ಇಬ್ಬರೂ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್‍ನಲ್ಲಿ ಬ್ಯುಸಿಯಾಗಿದ್ದರು. ಆ ಮೂಲಕ ಮಳೆ ಹಾನಿ ವೀಕ್ಷಣೆಯಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಧಿಕಾರಿಗಳು, ಬೆಳಗ್ಗೆಯಿಂದಲೂ ನಾವು ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.

ಇತ್ತ ಇದೇ ಸಂದರ್ಭದಲ್ಲಿ ಮಳೆಯಿಂದ ಸಮಸ್ಯೆ ಎದುರಿಸಿದ್ದ ಸಾರ್ವಜನಿಕರು ಆರ್.ಅಶೋಕ್ ಅವರನ್ನ ತರಾಟೆ ತೆಗೆದುಕೊಂಡರು. ಸ್ಥಳೀಯರ ವಿರೋಧ ಹೆಚ್ಚಾದ ಹಿನ್ನೆಲೆ ಸಚಿವರು ಬೇರೆ ಸ್ಥಳದ ಕಡೆ ಮುಖ ಮಾಡಿದರು.

BNG Ashok

ಮಳೆ ಹಾನಿಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು, ಮುಂದಿನ ಮೂರು ದಿನಗಳಲ್ಲಿ ಮಳೆ ಹಾನಿ ಪ್ರದೇಶದಲ್ಲಿ ಆಗಿರುವ ಒತ್ತುವರಿ ತೆರವು ಕೆಲಸ ಶುರುವಾಗುತ್ತೆ. ಉತ್ತರಹಳ್ಳಿಯಲ್ಲಿ ಇಂದಿನಿಂದ ತೆರವು ಕೆಲಸ ಶುರು ಮಾಡಲು ಹೇಳಿದ್ದೇನೆ. ಒತ್ತವರಿದಾರರು ಎಷ್ಟೇ ಪ್ರಭಾವಿಗಳಾದರೂ ಬಿಡಲ್ಲ. ಅಲ್ಲದೇ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

BNG CM BSY

ಸಚಿವರ ಭೇಟಿಗೂ ಮುನ್ನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಮಳೆ ಹಾನಿಯಾಗಿದ್ದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರಕ್ಕೆ ಭೇಟಿ ನೀಡಿ ಪ್ರತಿಯೊಂದು ಮನೆಗೂ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಮಳೆಯಿಂದ ನಷ್ಟ ಎದುರಿಸಿದ ಕುಟುಂಬಗಳಿಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಇಂದು ಸಂಜೆಯೇ ಹಾನಿಗೊಳಗಾಗಿರುವ 700 ಕುಟುಂಬಗಳಿಗೆ ಚೆಕ್ ಮೂಲಕ ವಿತರಣೆ ಆಗಲಿದೆ ಎಂದು ಸಿಎಂ ಬಿಎಸ್‍ವೈ ಘೋಷಿಸಿದ್ದಾರೆ.

ನಿನ್ನೆ ಒಂದು ದಿನ ಸುರಿದ ಮಳೆಗೆ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಮನೆಗಳು ಮುಳುಗಿದ್ದವು. ದಸರಾ ಹಬ್ಬದ ಖುಷಿಯಲ್ಲಿದ್ದ ಮನೆಗಳಲ್ಲಿ ಈಗ ಮಂದಿ ಹಠಾತ್ ಪರಿಣಾಮದಿಂದ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯ, ಬಟ್ಟೆಬರೆ ಎಲ್ಲವೂ ಮಳೆ ನೀರಿನಿಂದ ಹಾಳಾಗಿವೆ. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಳಾಗಿವೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಎಲ್ಲವೂ ನೀರು ಪಾಲಾಗಿದ್ದು, ಮತ್ತೆ ಸಂಪಾದಿಸೋದು ಹೇಗೆ ಎಂದು ಕೆಲ ಸ್ಥಳೀಯರು ಆಕ್ರೋಶ ಹೊರಹಾಕಿದರು. ಕೆಲ ಪ್ರದೇಶದ ಪ್ರಿಟಿಂಗ್‍ಪ್ರೆಸ್, ಗಿರಣಿಗಳಿಗೆ ನೀರು ನುಗ್ಗಿದ್ದು, ಸಂಗ್ರಹಿಸಿಟ್ಟಿದ್ದ ಮೂಟೆಗಟ್ಟಲೇ ಧಾನ್ಯಗಳು, ಹಿಟ್ಟು ಹಾಳಾಗಿದೆ.

Share This Article
Leave a Comment

Leave a Reply

Your email address will not be published. Required fields are marked *