ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ಇಂದು ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಗರ್ಭಗುಡಿ ಬಳಿ ಬಂದಿದ್ದು, ಈ ಕ್ಷೇತ್ರದ ಮೊಸಳೆ ಅನ್ನೋದು ವಿಶೇಷ. ಈ ಕ್ಷೇತ್ರ ಕೆರೆ ನೀರಿನ ಮಧ್ಯೆ ಇದ್ದು ಇಲ್ಲಿನ ಕೆರೆಯಲ್ಲಿ ವಾಸವಾಗಿರುವ ದೇವರ ಮೊಸಳೆ ಎಂದೇ ಪ್ರಸಿದ್ಧಿ ಪಡೆದ ‘ಬಬಿಯಾ’ ಅನ್ನುವ ಮೊಸಳೆ ಗರ್ಭಗುಡಿ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುವ ‘ಬಬಿಯಾ’ಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಆದರೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ
ಹೋಗುವುದು ಹೇಗೆ?
ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಅನಂತಪುರ ದೇವಾಲಯವಿದೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಾಣಬಹುದು. ಮಾತ್ರವಲ್ಲದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ಪ್ರತೀತಿ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ವಿಗ್ರಹವು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುತ್ತದೆ. ಆದರೆ ಇಲ್ಲಿನ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದದ ಗಿಡಮೂಲಿಕೆಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ತಯಾರಿಸಿದ್ದಾಗಿದೆ. ಇದಕ್ಕೆ ‘ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೆಸರಿದೆ.
ದೇವರ ಮೊಸಳೆ ಬಬಿಯಾ:
ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುತ್ತದೆ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ’ ‘ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇದೆ. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಈ ಮೊಸಳೆಯೂ ಕೂಡ ಇಲ್ಲೇ ವಾಸವಾಗಿರುತ್ತದೆ. ದೇವರ ನೈವೇಧ್ಯವೇ ಇದಕ್ಕೆ ನಿತ್ಯ ಆಹಾರ. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿದೆ. ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲವಂತೆ.
ಈ ದೇವಾಲಯದ ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯ ಇದೆ. ಅಷ್ಟೇ ಅಲ್ಲದೇ ಪುರಾತನ ಕಾಲದ ತುಳುಶಾಸನ ಇದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಶಾಲಕೃಷ್ಣ ದೇವರು, ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಈ ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣಬಹುದು. ದೇವಾಲಯದ ವೆಬ್ ಸೈಟ್: www.ananthapuratemple.com