ಬೆಂಗಳೂರು: ಎಸ್ಸಿ, ಎಸ್‍ಟಿ ಗುಣಲಕ್ಷಣ ಇರೋ ಎಲ್ಲ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಬದಲಾಗಿ ಯಾವುದೋ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮೀಸಲಾತಿ ಸಿಗುವುದಲ್ಲ ಎಂದು ಜಾತಿಜನಗಣತಿ ಸಮೀಕ್ಷೆ ವರದಿಯ ಜಾರಿ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‍ಟಿ ಗುಣಲಕ್ಷಣ ಇರುವ ಎಲ್ಲ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಜನಸಂಖ್ಯೆಯನ್ನು ಆಧರಸಿ ಮೀಸಲಾತಿ ಕೊಡಲಿ. ಎಸ್‍ಟಿ ಸಮುದಾಯ ಎಂದು ಕೇಳುತ್ತಿರುವ ಕುರುಬ ಸಮುದಾಯ, ಗಂಗಾಮತಸ್ಥರು ಎಲ್ಲರಿಗೂ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಕೊಡಗಿನಲ್ಲಿರುವ ಕುರುಬರೆಲ್ಲ ಎಸ್‍ಟಿ ಗೊಂಡ ಹಾಗೂ ರಾಜಗೊಂಡ ಬೀದರ್, ಗುಲ್ಬರ್ಗ ಹಾಗೂ ಯಾದಗಿರಿಯಲ್ಲಿ ಕೆಲವರು ಕುರುಬರು ಅಂತ ಕರೆದುಕೊಳ್ತಾರೆ. ಗೊಂಡಾ ಈಗಾಗಲೇ ಎಸ್‍ಟಿ ಯಲ್ಲಿ ಬರುತ್ತದೆ. ಗಂಗಾಮತಸ್ಥರದ್ದು, ಕಾಡುಗೊಲ್ಲರನ್ನು ಎಸ್‍ಟಿಗೆ ಶಿಫಾರಸ್ಸು ಮಾಡಿದ್ದೇವೆ. ಟ್ರೈಬಲ್ ಕ್ಯಾರೆಕ್ಟರ್ ಇರುವವರನ್ನೆಲ್ಲ ಎಸ್‍ಟಿಗೆ ಸೇರಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಾತಿ ಜನಗಣತಿ ವರದಿ ಜಾರಿ ಮಾಡುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಈಶ್ವರಪ್ಪ ಮಾತುಗಳ ಮೇಲೆ ನಂಬಿಕೆ ಇಡಬೇಕಾಲ್ಲ, ವರದಿಯ ಸ್ವೀಕಾರ ಮತ್ತು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಸರ್ಕಾರ ಆಯೋಗಕ್ಕೆ ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಮಾಡಲಿ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದರು.
ಯಾವ್ಯಾವ ಸಮುದಾಯ ಅರ್ಹವೋ ಅವರೆಲ್ಲರಿಗೂ ಮೀಸಲಾತಿ ಅಗತ್ಯವಾಗಿ ಕೊಡಬೇಕು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೇಚ್ಚಳಕ್ಕೆ ನಮ್ಮ ವಿರೋಧ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.