ಸಿದ್ದರಾಮಯ್ಯ ಕಾರು ಚಾಲಕ, ಕೈ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್‌ಐಆರ್‌ ದಾಖಲು

Public TV
1 Min Read
kusuma dk shivakumar siddaramaiah

ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮತ್ತು ಸಿದ್ದರಾಮಯ್ಯನವರ ಕಾರು ಚಾಲಕ, ಪೈಲೆಟ್‌ ವಾಹನದಲ್ಲಿದ್ದ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚುನಾವಣಾಧಿಕಾರಿ ನಾಗರಾಜ ಎನ್‌ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 353 (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ), 188 (ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದಿರುವುದು) ಅಡಿ ಪ್ರಕರಣ ದಾಖಲಾಗಿದೆ.

kusuma congress

ಏನಿದು ಪ್ರಕರಣ?
ಇಂದು ಬೆಳಗ್ಗೆ ಬಿಬಿಎಂಪಿ ಕಚೇರಿಯಲ್ಲಿ ಕುಸುಮಾ ಅವರ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಆಗಮಿಸಿದ್ದರು. ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಚೇರಿಯ 100 ಮೀಟರ್‌ ದೂರದಲ್ಲಿ ಯಾವುದೇ ವಾಹನಗಳು ಬಾರದಂತೆ ಬ್ಯಾರಿಕೇಡ್‌ ಹಾಕಲಾಗಿತ್ತು.

ಬ್ಯಾರಿಕೇಡ್‌ ಹಾಕಲಾಗಿದ್ದರೂ ಕಾಂಗ್ರೆಸ್‌ ನಾಯಕರು ಒಳಬರಲು ಪ್ರಯತ್ನಿಸಿದ್ದಾಗ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರ ಬೆಂಗಾವಲು ಪಡೆಯ ಪೈಲಟ್‌ ವಾಹನದಲ್ಲಿದ್ದ ಪೊಲೀಸರು ಕರ್ತವ್ಯ ನಿರತ ಪೊಲೀಸರನ್ನು ತಳ್ಳಿ ಬ್ಯಾರಿಕೇಡ್‌ ಸರಿಸಿ ಬಿಬಿಎಂಪಿ ಕಚೇರಿಗೆ ವಾಹನಗಳನ್ನು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಬೆಂಗಾವಲು ಪಡೆಯ ಪೊಲೀಸರು, ಅ‍ಭ್ಯರ್ಥಿ ಕುಸುಮಾ ಮತ್ತು ಕಾಂಗ್ರೆಸ್‌ ಬೆಂಬಲಿಗರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಾಗರಾಜ ಎನ್‌ ದೂರು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *