– ಪಾಳೇಗಾರಿಕೆ ಸಂಸ್ಕೃತಿ ನಡೆಯಲ್ಲ
ಹಾಸನ: ಮಾಜಿ ಸಚಿವ ರೇವಣ್ಣ ಅವರು ಮಾಡಿದ್ರೆ ರಾಜಕಾರಣ, ಬೇರೆಯವರು ಮಾಡಿದ್ರೆ ಕಾನೂನು ಬಾಹಿರ ಅನ್ನೋದಾದ್ರೆ ನಾವು ಕೂಡ ರಾಜಕಾರಣಾನೆ ಮಾಡುತ್ತೀವಿ. ಹಾಸನದಲ್ಲಿ ಪಾಳೇಗಾರಿಕೆ ಸಂಸ್ಕೃತಿ ನಡೆಯಲ್ಲ ಎಂದು ಮಾಜಿ ಸಚಿವ ರೇವಣ್ಣಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.
ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ, ಮುಂಚೆ ಇವರು ಹೇಳಿದ್ದೇ ಶಾಸನ ಎಂಬಂತೆ ಇತ್ತು. ಆ ಶಾಸನ, ಪಾಳೇಗಾರಿಕೆ ಸಂಸ್ಕೃತಿ ಈಗ ನಡೆಯಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಜನ ಏನು ಅಪೇಕ್ಷೆ ಪಡುತ್ತಾರೋ ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ರೇವಣ್ಣ ಅವರು ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯ, ತುಮಕೂರಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆಯೇ ಕಾರಣ: ರೇವಣ್ಣ
ಹಾಸನ ನಗರಸಭೆ ಅಧ್ಯಕ್ಷಗಾದಿ ಎಸ್‍ಟಿ ಪಂಗಡಕ್ಕೆ ಮೀಸಲಾಗಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ರೇವಣ್ಣ ಇದು ಕಾನೂನು ಬಾಹಿರ ಎಂದು ಹೇಳಿದ್ರು. ಮಾಜಿ ಸಚಿವ ರೇವಣ್ಣ ಆರೋಪಕ್ಕೆ ಶಾಸಕ ಪ್ರೀತಂಗೌಡ ಖಡಕ್ಕಾಗೇ ಪ್ರತಿಕ್ರಿಯಿಸಿದ್ದು, ಸರ್ಕಾರ ಕಾನೂನಿನಂತೆ ಮೀಸಲಾತಿ ನಿಗದಿ ಮಾಡಿದೆ. ಈ ಹಿಂದೆ ಹಾಸನ ನಗರಸಭೆಯ 35 ವಾರ್ಡಿನ ಮೀಸಲಾತಿಯನ್ನ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಕಟಿಸಿತ್ತು. ಇವರು ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಯಾಕೆ ಬದಲಾಯಿಸಿದ್ರು ನೆನಪಿಸಿಕೊಳ್ಳಬೇಕು. ಆಗ ಕಾನೂನು ಎಲ್ಲಿ ಹೋಗಿತ್ತು. ಅವರು ಮಾಡಿದ್ರೆ ರಾಜಕಾರಣ, ಬೇರೆಯವರು ಮಾಡಿದ್ರೆ ಕಾನೂನು ಬಾಹಿರ ಅನ್ನೋದಾದ್ರೆ ನಾವು ರಾಜಕಾರಣಾನೇ ಮಾಡ್ತೀವಿ ಎಂದರು.
4 ನೇ ವಾರ್ಡಿನಲ್ಲಿ ಅತೀ ಹೆಚ್ಚು ಪರಿಶಿಷ್ಟಜಾತಿ ಜನಾಂಗದವರಿದ್ರು. ಆದರೆ ಅದನ್ನು ಜನರಲ್ ಮಾಡಿ ಯಾವ ಕಾನೂನು ಪಾಲನೆ ಮಾಡಿದ್ರು. ರಾಜಕಾರಣದಲ್ಲಿ ಹಾಕುವ ಪಟ್ಟನ್ನ ರೇವಣ್ಣನವರೂ ಮಾಡಿದ್ರು. ನಾನು ಮಾಡ್ತೀನಿ. ಅದಕ್ಕೆ ಹತಾಶರಾಗದೆ ರೇವಣ್ಣ, ರಾಜಕಾರಣವನ್ನು ಒಪ್ಪಿಕೊಳ್ಳಬೇಕು. ಹಾಸನ ನಗರಸಭೆಯಲ್ಲಿ ಯಾರಿಗೂ ಬಹುಮತವಿಲ್ಲ. ಹಾಸನ ವಿಧಾನಸಭೆ ಜನ ಅವರ ಪರವಾಗಿಲ್ಲ ಎಂಬುದನ್ನು ರೇವಣ್ಣ ಅರ್ಥ ಮಾಡಿಕೊಳ್ಳಬೇಕು. ಹಾಸನ ಜನ ಅಭಿವೃದ್ಧಿ ಪರ, ಬಿಜೆಪಿ ಪರ ಇದ್ದಾರೆ. ಹೀಗಾಗಿ ರೇವಣ್ಣ ಅವರು ನಮಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.