– ಚಿಕಿತ್ಸೆ ಫಲಿಸದೆ ಸಾವು
ಹೈದರಾಬಾದ್: ಪ್ರೀತಿಸಿ ಮದುವೆಯಾದ ಏಳು ತಿಂಗಳಿನಲ್ಲೇ 22ರ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ದತ್ತಪ್ಪುಗೂಡಂ ಗ್ರಾಮದ ನಿವಾಸಿ ನವಿತಾ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಪತಿಯ ಕಿರುಕುಳವನ್ನು ಸಹಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ನವಿತಾ ಪ್ರೀತಿಸಿದ ಯುವಕನ ಜೊತೆ ಮದುವೆಯಾಗಿದ್ದಳು. ವಿವಾಹವಾದ ಈ ದಂಪತಿ ದತ್ತಪ್ಪಗೂಡಂ ಗ್ರಾಮದಲ್ಲಿ ನೆಲೆಸಿದ್ದರು. ಮದುವೆಯಾದ ಆರಂಭದಲ್ಲಿ ಇಬ್ಬರ ಸಂಸಾರ ಚೆನ್ನಾಗಿ ನಡೆಯುತ್ತಿತ್ತು. ದಿನ ಕಳೆದಂತೆ ನವಿತಾಗೆ ಪತಿ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಪತಿಯ ಕಿರುಕುಳವನ್ನು ಸಹಿಸಲಾಗದೇ ಇದೇ ತಿಂಗಳ 2 ರಂದು ನವಿತಾ ಕೀಟನಾಶಕವನ್ನು ಕುಡಿದಿದ್ದಾಳೆ ಎಂದು ನವಿತಾ ಸಂಬಂಧಿಕರು ಹೇಳಿದ್ದಾರೆ.
ಇದನ್ನು ಗಮನಿಸಿದ ಕುಟುಂಬದವರು ತಕ್ಷಣ ಆಕೆಯನ್ನು ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ನವಿತಾ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಗಳ ಸಾವಿನ ಬಗ್ಗೆ ತಿಳಿದ ನಂತರ ಆಕೆಯ ಕುಟುಂಬದವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನವಿತಾ ಪೋಷಕರು ಆರೋಪಿಸಿದ್ದಾರೆ. ಸದ್ಯಕ್ಕೆ ನವಿತಾ ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.