ಹಾಸನ: ಕೊರೊನಾ ಕಡಿಮೆ ಆಗುವವರೆಗೂ ಶಾಲೆ ತೆರೆಯಬಾರದು. ಒಂದು ವೇಳೆ ಶಾಲೆ ತೆರೆದರೆ ತಲೆಕೆಟ್ಟು ತೆರೆಯಬೇಕು ಅಷ್ಟೇ ಎಂದು ಶಾಸಕ ಶಿವಲಿಂಗೇಗೌಡ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಯಾರೋ ಕೆಲವರ ಒತ್ತಡಕ್ಕೆ ಮಣಿದು ಶಾಲೆ ಆರಂಭಿಸುವುದು ಬೇಡ: ಎಚ್‍ಡಿಕೆ
ನಗರದಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಯಾವುದೇ ಕಾರಣಕ್ಕೂ ಕೊರೊನಾ ಕಂಟ್ರೋಲ್‍ಗೆ ಬರುವವರೆಗೂ ಶಾಲೆ ತೆರೆಯಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದು ವೇಳೆ ಶಾಲೆ ತೆರೆದರೆ ತಲೆಕೆಟ್ಟು ತೆರೆಯಬೇಕು ಅಷ್ಟೇ ಎಂದು ಹೇಳಿದರು.
ಪೋಷಕರು ಹೇಗೋ ಮಕ್ಕಳನ್ನು ಮನೆಯಲ್ಲಿ ಸೇಫ್ ಆಗಿ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಶಾಲೆಗೆ ಹೋಗಿ ಮಕ್ಕಳಿಗೆ ಕೊರೊನಾ ಬಂದರೆ ಕಂಟ್ರೋಲ್ ಮಾಡುವುದು ಕಷ್ಟ. ಈಗ ಶಿಕ್ಷಕರದ್ದು ಕೂಡ ಗೋಳಿನ ಕಥೆ ಆಗಿದೆ. ಈ ಕೊರೊನಾವನ್ನು ಒಂದು ವರ್ಷ ಏನು ಮಾಡಲು ಸಾಧ್ಯವಿಲ್ಲ. ಏನೇನು ತರಗತಿ ನಡೆಸಬೇಕೋ ಅದನ್ನು ಸದ್ಯಕ್ಕೆ ಆನ್‍ಲೈನ್‍ನಲ್ಲಿ ನಡೆಸಿ. ಈ ಸಂದರ್ಭದಲ್ಲಿ ಮಾತ್ರ ದಯವಿಟ್ಟು ಶಾಲೆ ತೆರೆಯುವುದು ಬೇಡ ಎಂದು ಶಾಸಕ ಶಿವಲಿಂಗೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇತ್ತೀಚಿನ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಶಾಲೆಗಳನ್ನು ಆರಂಭಿಸಬೇಕು ಎಂಬ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇದೆ. ಸರ್ಕಾರ ಶಾಲೆ ಪ್ರಾರಂಭ ಮಾಡುವುದು ಬೇಡ. ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಅಭಿಯಾನ ನಡೆಯುತ್ತಿದೆ. ಪೋಷಕರು ಕೂಡ ಶಾಲೆ ಪ್ರಾರಂಭ ಬೇಡ ಅಂತಿದ್ದಾರೆ. ಸರ್ಕಾರ ವಿದ್ಯಾಗಮ ಕಾರ್ಯಕ್ರಮ ತಂದಿದೆ. ಇದರಿಂದ ಈಗಾಗಲೇ 26 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ. ಪೋಷಕರ ಪರ ಶಾಲೆ ಆರಂಭಿಸುವುದು ಬೇಡ ಎಂದು ಸರ್ಕಾರಕ್ಕೆ ಒತ್ತಾಯ ಹಾಕುತ್ತಿದ್ದೇನೆ ಎಂದಿದ್ದಾರೆ.