– ವಾಕಿಂಗ್ ಹೋಗಿದ್ದಾಗ ಗುಂಡಿಕ್ಕಿ ಹತ್ಯೆ
ಲಕ್ನೋ: ವಾಕಿಂಗ್ ಹೋಗಿದ್ದ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಶಾಸಕನ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತ ದುರ್ದೈವಿಯನ್ನು ನರೇಶ್ ತ್ಯಾಗಿ(58) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ ಎಂದಿನಂತೆ ಮನೆಯ ಬಳಿ ವಾಕಿಂಗ್ ಹೋಗಿದ್ದರು. ಈ ವೇಳೆ ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನರೇಶ್ ಮೇಲೆ ದಾಳಿ ಮಾಡಿದ್ದಾರೆ. ಘಟನೆ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೃತರನ್ನು ಮುರಾದನಗರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಜಿತ್ ಪಾಲ್ ಸಂಬಂಧಿ ಎಂದು ತಿಳಿದುಬಂದಿದೆ. ಮೃತ ನರೇಶ್, ಪಿಡಬ್ಲ್ಯುಡಿ ಗುತ್ತಿಗೆದಾರರಾಗಿ ಕೆಲ ಸ ನಿರ್ವಹಿಸುತ್ತಿದ್ದರು. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ದೇವಸ್ಥಾನದ ಸಮೀಪ ನರೇಶ್ ತ್ಯಾಗಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ನರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಈಗಾಗಲೇ ಎಸ್‍ಎಸ್‍ಪಿ 4 ತಂಡಗಳನ್ನು ರಚಿಸಲಾಗಿದೆ. ಇತ್ತ ಘಟನೆ ನಡೆದಿದ್ದಲ್ಲಿನ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.