ಮಡಿಕೇರಿ: ಕೊಡಗಿನ ಪೊಲೀಸ್ ಇಲಾಖೆಯಲ್ಲಿ ಬಾಂಬ್ ಪತ್ತೆದಳದಲ್ಲಿದ್ದ ರ‍್ಯಾಂಬೋ ಅನ್ನೋ ಸ್ಕ್ವಾಡ್ ಡಾಗ್ ಕರ್ತವ್ಯದಲ್ಲಿರುವಾಗಲೇ ಸಾವನ್ನಪ್ಪಿದೆ. ಹೀಗಾಗಿ ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.
ಪತ್ತೆದಳದಲ್ಲಿದ್ದ ರ‍್ಯಾಂಬೋ ಶ್ವಾನ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿತ್ತು. 2013ರ ಅಕ್ಟೋಬರ್‌ನಲ್ಲಿ ಹುಟ್ಟಿದ ಶ್ವಾನವನ್ನು ನಾಲ್ಕು ತಿಂಗಳ ಮರಿ ಇರುವಾಗಲೇ ಪೊಲೀಸ್ ತರಬೇತಿಗೆ ಕರೆತರಲಾಗಿತ್ತು. ಮೊದಲು ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದಿದ್ದ ಶ್ವಾನ ಬಳಿಕ ಕೊಡಗಿನ ಬಾಂಬ್ ಪತ್ತೆದಳಕ್ಕೆ ಸೇರ್ಪಡೆಗೊಂಡಿತ್ತು. ಅಂದಿನಿಂದ ಅತ್ಯಂತ ಟಫ್ ಆಗಿದ್ದ ಈ ಶ್ವಾನ ಅಷ್ಟೇ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿತ್ತು. ಹೀಗಾಗಿಯೇ ಇದಕ್ಕೆ ರ‍್ಯಾಂಬೋ ಎಂಬ ಹೆಸರಿಡಲಾಗಿತ್ತು ಎಂದು ಟ್ರೈನರ್ ಸುಕುಮಾರ್ ಹೇಳಿದ್ದಾರೆ.
ಗೋ ಎಂದು ಸೂಚನೆ ಕೊಡುತ್ತಿದ್ದಂತೆ ಅಪರಾಧಿಗಳು ಎಲ್ಲೇ ಅಡಗಿದ್ದರೂ ಛಂಗನೇ ಹಾರಿ ಕಚ್ಚಿ ಹಿಡಿದೆಳೆದು ತರುತ್ತಿದ್ದ. ಕರ್ತವ್ಯಕ್ಕೆ ಸೇರಿದ ದಿನದಿಂದಲೂ ಇದುವರೆಗೆ ಬರೋಬ್ಬರಿ 500ಕ್ಕೂ ಹೆಚ್ಚು ಆಪರೇಷನ್‍ಗಳಲ್ಲಿ ರ‍್ಯಾಂಬೋ ಭಾಗವಹಿಸಿದ್ದ. ಮೊನ್ನೆ ಸಹ ಉಗ್ರರು ದೇಶದೊಳಗೆ ನುಗ್ಗದಂತೆ ಹೇಗೆ ತಡೆಯಬಹುದೆಂಬ ಮಾಕ್ ಡ್ರಿಲ್‍ಗೆಂದು ರ‍್ಯಾಂಬೋ ಸುರತ್ಕಲ್‍ಗೆ ಹೋಗಿದ್ದ. ಆದರೆ ಬುಧವಾರ ಕರ್ತವ್ಯದಲ್ಲಿರುವಾಗ ರ‍್ಯಾಂಬೋಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ರ‍್ಯಾಂಬೋ ಹೃದಯಾಘಾತದಿಂದ ಪ್ರಾಣಬಿಟ್ಟಿದೆ ಎಂದು ಶ್ವಾನದಳ ಅಧಿಕಾರಿ ಜಿತೇಂದ್ರ ರೈ ತಿಳಿಸಿದ್ದಾರೆ.
ಗುರುವಾರ ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ಎಸ್.ಪಿ.ಕ್ಷಮಾ ಮಿಶ್ರಾ ಅವರ ನೇತೃತ್ವದಲ್ಲಿ ರ‍್ಯಾಂಬೋಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಮೂರು ಸುತ್ತು ಕುಶಾಲತೋಪು ಸಿಡಿಸಿ ಕೊನೆಗೆ ಸರ್ಕಾರಿ ಗೌರವದೊಂದಿಗೆ ಪೊಲೀಸ್ ಮೈದಾನದ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು.