– ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರೂ ಹಿಂದೇಟು
– ಸಂಬಂಧಿಕರು ಸಿಗದ ಹಿನ್ನೆಲೆ ತಾವೇ ಅಂತ್ಯಕ್ರಿಯೆ
ಚಿಕ್ಕಮಗಳೂರು: ಕೊರೊನಾ ಆತಂಕದ ಹಿನ್ನೆಲೆ ಅನಾಥ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕಿದ್ದರಿಂದ ಮೃತಪಟ್ಟ ವೃದ್ಧೆಯನ್ನು ಸ್ಥಳೀಯ ಯುವಕರೇ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವೃದ್ಧೆಯೊಬ್ಬರು ನಾಲ್ಕು ವರ್ಷಗಳಿಂದ ಲಿಂಗದಹಳ್ಳಿಯಲ್ಲಿ ವಾಸಿಸುತ್ತಿದ್ದರು. 20 ದಿನಗಳಿಂದ ಪಾಶ್ವವಾಯು ಸೇರಿದಂತೆ ಆರೋಗ್ಯ ಹದಗೆಟ್ಟು ತೀವ್ರ ಅಸ್ವಸ್ಥರಾಗಿದ್ದರು. ಸ್ಥಳೀಯ ಯುವಕರು ಅಜ್ಜಿಯ ಆರೈಕೆ ಮಾಡಿದ್ದರು. ಅಜ್ಜಿಯ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರಗೊಂಡ ಹಿನ್ನೆಲೆ ಯುವಕರು ಪೊಲೀಸ್, ಆಸ್ಪತ್ರೆ ಹಾಗೂ ಗ್ರಾಮ ಪಂಚಾಯಿತಿಯ ಗಮನಕ್ಕೂ ತಂದಿದ್ದರು. ಆದರೆ ಯಾರೂ ಸ್ಪಂದಿಸಿರಲಿಲ್ಲ.
ಕೊರೊನಾ ಆತಂಕದ ಕಾರಣದಿಂದ ಆಸ್ಪತ್ರೆಯಲ್ಲಿ ಆರೈಕೆ ಅಸಾಧ್ಯ ಎಂದು ಅಜ್ಜಿಯನ್ನು ಆಸ್ಪತ್ರೆ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದರು. ಪ್ರತಿ ದಿನ ಸ್ಥಳಿಯ ಯುವಕರೇ ಅಜ್ಜಿಯ ಆರೈಕೆ ಮಾಡುತ್ತಿದ್ದರು. ಆದರೆ ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಲಿಂಗದಹಳ್ಳಿ ಯುವಕರು ಅಜ್ಜಿ ಮೂಲತಃ ಭದ್ರಾವತಿಯವರೆಂದು ತಿಳಿದು ಅವರ ಮಕ್ಕಳಿಗೆ ವಿಷಯ ಮುಟ್ಟಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ.
ಮೃತ ಅಜ್ಜಿಯನ್ನು ಎಷ್ಟು ದಿನ ಇಟ್ಟುಕೊಳ್ಳುವುದು ಎಂದು ಕಳೆದೊಂದು ತಿಂಗಳಿಂದ ಅಜ್ಜಿಯ ಆರೈಕೆಯಲ್ಲಿದ್ದ ಲಿಂಗದಹಳ್ಳಿಯ ಯುವಕರಾದ ಅಭಿಷೇಕ್, ವಿಕ್ಕಿ, ಯೂನಿಸ್, ಪರ್ವೇಜ್ ಅಜ್ಜಿಯ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.