ದಾವಣಗೆರೆ: ನಗರದ ಬಹುತೇಕ ಬಡಾವಣೆಗಳಲ್ಲಿ ‘ಮನೆ ಬಾಡಿಗೆಗೆ ಇದೆ’ ಎಂಬ ಬೋರ್ಡ್ ಮಾಮೂಲಿ. ಮಾರುಕಟ್ಟೆಯಲ್ಲೂ ಖಾಲಿ ಮಳಿಗೆಗಳಿಗೂ ಬಾಡಿಗೆದಾರರು ಬರುತ್ತಿಲ್ಲ. ಬಾಡಿಗೆ ಕಡಿಮೆ ಮಾಡುತ್ತೇವೆ ಎಂದರೂ ಜನ ಮುಂದೆ ಬರುತ್ತಿಲ್ಲ. ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶೋರೂಂಗಳಲ್ಲೂ ವ್ಯಾಪಾರ-ವಹಿವಾಟು ಅಷ್ಟಕ್ಕಷ್ಟೇ. ವ್ಯಾಪಾರ-ವಹಿವಾಟುಗಳು ದಿನೇದಿನೆ ನೆಲಕಚ್ಚುತ್ತಿವೆ. ಪ್ರತಿಷ್ಟಿತ ಬಡಾವಣೆಗಳಲ್ಲಿ, ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಮಳಿಗೆ ಬಾಡಿಗೆಗೆ ಇದೆ.
ಕೊರೊನಾ ಹೆಮ್ಮಾರಿ ಹಾವಳಿ ಅರಂಭವಾಗುವದಕ್ಕೂ ಮುನ್ನ ಅಂದ್ರೆ, ಇದೇ ವರ್ಷ ಜನವರಿ, ಫೆಬ್ರವರಿ ತಿಂಗಳಲ್ಲಿ ದಾವಣಗೆರೆಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ಮನೆ ಇರಲಿ ಒಂದು ರೂಂ ಸಿಗೋದು ಕಷ್ಟವಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್ ಬಂದಿದ್ದೇ ಬಂದಿದ್ದು, ದಾವಣಗೆರೆ ವ್ಯಾಪಾರ-ವಹಿವಾಟಿಗೆ ಭಾರೀ ಪೆಟ್ಟು ಬಿತ್ತು. ಲಾಕ್‍ಡೌನ್ ನಂತರ ಸುಧಾರಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವಜನಿಕರಲ್ಲಿತ್ತು. ಆದರೆ ಲಾಕ್ ಡೌನ್ ತೆರವುಗೊಂಡು ಈಗಾಗಲೇ ಅನ್ಲಾಕ್ ವರ್ಷನ್ 5.0 ಜಾರಿಗೊಂಡಿದೆ. ಆದರೂ ವ್ಯಾಪಾರ-ವಹಿವಾಟುಗಳು ಕುದುರುವ ಲಕ್ಷಣ ಕಾಣ್ತಿಲ್ಲ. ಇರುವಷ್ಟರಲ್ಲೇ ಜೀವನ ಮಾಡೋಣ ಎಂದು ಜನ ಮಿತವ್ಯಯಕ್ಕೆ ಹೊಂದಿಕೊಂಡಂತೆ ಕಾಣ್ತಿದೆ. ವ್ಯಾಪಾರವಿಲ್ಲದೇ ಎಷ್ಟೋ ಮಳಿಗೆಗಳು ಕಡಿಮೆ ಬಾಡಿಗೆಯ ಮಳಿಗೆಗೆ ಶಿಫ್ಟ್ ಆಗಿದ್ರೆ, ಇನ್ನೂ ಕೆಲವು ಅಂಗಡಿಗಳು ಶಾಶ್ವತವಾಗಿ ಬಂದ್ ಆಗಿವೆ.
ದಾವಣಗೆರೆ ವಿದ್ಯಾನಗರಿ ಎಂಬ ಖ್ಯಾತಿಗೆ ಅನೇಕ ಶಾಲಾ-ಕಾಲೇಜುಗಳ, ಎಂಬಿಎ, ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ನರ್ಸಿಂಗ್ ಕಾಲೇಜುಗಳು ತಮ್ಮದೇ ಆದ ಕೊಡುಗೆ ನೀಡಿದ್ದವು. ಲಾಕ್ ಡೌನ್ ಹಿನ್ನೆಲೆ ಶಾಲಾ-ಕಾಲೇಜುಗಳೂ ಬಂದ್ ಆದವು. ಎಷ್ಟೋ ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದರು. ಜೀವನ ನಿರ್ವಹಣೆಗೆಗೆ ಅತಿಥಿ ಉಪನ್ಯಾಸಕರು ಬೀದಿ ಬದಿ ಹಣ್ಣು-ತರಕಾರಿ ವ್ಯಾಪಾರ ಮಾಡುವ ಸ್ಥಿತಿ ಬಂತು. ಜೀವನ ಮಿತವ್ಯಯಕ್ಕಾಗಿ ದೊಡ್ಡಮನೆಗಳನ್ನು ಬಿಟ್ಟು ಸಣ್ಣ ಬಾಡಿಗೆ ಮನೆಗಳಿಗೆ ಶಿಫ್ಟ್ ಆಗಲು ಆರಂಭಿಸಿದರು.
ಇದೇ ಪರಿಸ್ಥಿತಿ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡಿತು. ಬರೋಬ್ಬರಿ ಮೂರು ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ವ್ಯಾಪಾರಸ್ಥರು ಕೂಡಿಟ್ಟ ಹಣವೆಲ್ಲಾ ಕರಗಿ ಹೋಗಿತ್ತು. ನಂತರ ಅನ್ಲಾಕ್ ವರ್ಷನ್ 1.0 ಜಾರಿಯಾದ ನಂತರ, ವ್ಯಾಪಾರ ಚೇತರಿಸಿಕೊಳ್ಳಬಹುದು ಅಂದುಕೊಂಡಿದ್ದು ಹುಸಿಯಾಗಿತ್ತು. ಹೊಟೇಲ್ ಉದ್ಯಮ ಸೇರಿದಂತೆ ಎಲ್ಲ ವ್ಯಾಪಾರ-ವಹಿವಾಟು ಪ್ರಪಾತಕ್ಕೆ ಜಾರಿದೆ. ಹಲವರು ತಮ್ಮ ವ್ಯಾಪಾರ ಬಂದ್ ಮಾಡಿ, ಮತ್ತೊಬ್ಬರಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕರೊನಾ ಹೆಮ್ಮಾರಿ ನೂರಾರು ಜೀವಹರಣ ಮಾಡುವ ಜತೆ ಸಾವಿರಾರು ಜನರ ಜೀವನವನ್ನು ನರಕವನ್ನಾಗಿಸಿದೆ ಎಂದು ಹೋಟೆಲ್ ಉದ್ಯಮಿ ಯುವರಾಜ್ ಹೇಳಿದ್ದಾರೆ.
ಈ ವರ್ಷ ಮಾರ್ಚ್ ಅಂತ್ಯದಿಂದ ಈವರೆಗೆ ಏಳು ತಿಂಗಳಿಂದ ವ್ಯಾಪಾರ ಕುಸಿಯುತ್ತಲೇ ಇದೆ. ನಗರ ಪ್ರದೇಶದಿಂದ ಹಲವರು ಹಳ್ಳಿ ಕಡೆ ಮುಖ ಮಾಡಿದ್ದಾರೆ. ಹೆಮ್ಮಾರಿ ಸೋಂಕು ನಿಯಂತ್ರಣಕ್ಕೆ ಬರಲಿಲ್ಲ ಅಂದ್ರೆ ಚೇತರಿಕೆ ಹೇಗೆ ಎಂಬ ಚಿಂತೆ ಸಾರ್ವಜನಿಕರನ್ನು ಕಾಡುತ್ತಿದೆ.