ಚಾಮರಾಜನಗರ: ಶಾಲೆ ಆರಂಭದ ಕುರಿತು ಗೊಂದಲ ಉಂಟಾಗಿದ್ದು, ಈ ಕುರಿತು ಸ್ವತಃ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತೊಳಸಿಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಶಾಲೆ ಆರಂಭದ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈ ಕುರಿತು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಸದ್ಯಕ್ಕೆ ಶಾಲೆ ತೆರೆಯುವುದಿಲ್ಲ. ಅಕ್ಟೋಬರ್ 15ರಿಂದ ಕೇಂದ್ರ ಸರ್ಕಾರ ಹಂತ ಹಂತವಾಗಿ ಶಾಲೆ ಪ್ರಾರಂಭಿಸಬಹುದೆಂದು ಅವಕಾಶ ನೀಡಿದೆ. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಯಾವುದೇ ತೀರ್ಮಾನ ಮಾಡಿಲ್ಲ ಎಂದರು ಸ್ಪಷ್ಟಪಡಿಸಿರು.
ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳು, ಜನ ಪ್ರತಿನಿಧಿಗಳ ಅಭಿಪ್ರಾಯ ಆಲಿಸಿ ತೀರ್ಮಾನಿಸುವ ನಿರ್ಧಾರ ಮಾಡಿದ್ದೇವೆ. ಶಾಲೆಯನ್ನು ಯಾವಾಗ, ಹೇಗೆ, ಮೊದಲು ಯಾವ ತರಗತಿ ಅರಂಭಿಸಬೇಕು ಎಂಬ ಬಗ್ಗೆ ಒಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಕಾಡಂಚಿನ ಜನರ ಕಷ್ಟ ಆಲಿಸುವ ಸಲುವಾಗಿ ಇಂಡಿಕನತ್ತ, ತೊಳಸಿಗೆರೆ ಗ್ರಾಮ ಸೇರಿದಂತೆ 14 ಗ್ರಾಮದ ಜನರ ಕಷ್ಟ ಆಲಿಸಿದರು. ಅಲ್ಲದೆ ರಸ್ತೆ, ವಿದ್ಯುತ್, ಶಾಲೆ, ಅಂಗನವಾಡಿ ಸೇರಿದಂತೆ ಎಲ್ಲ ಸಮಸ್ಯೆ ಬಗೆಹರಿಸುವ ಕುರಿತು ಮಾಹಿತಿ ಸಂಗ್ರಹಿಸಿ ಒಂದೂವರೆ ತಿಂಗಳಲ್ಲಿ ಕಾಡಂಚಿಂನ ಗ್ರಾಮದ ಜನರ ಸಮಸ್ಯೆ ಪರಿಹರಿಸುವುದಾಗಿ ಜನರಿಗೆ ವಾಗ್ದಾನ ನೀಡಿದರು.