ಸಾವಿಗೆ ಆಹ್ವಾನ ನೀಡುತ್ತಿರುವ ದೇವದುರ್ಗದ ರಸ್ತೆ

Public TV
2 Min Read
rcr road

– ಕೆಸರು ಗದ್ದೆಯಂತಾದ ರಸ್ತೆ
– ನಿತ್ಯ ಪ್ರಯಾಣಿಕರ ಪರದಾಟ

ರಾಯಚೂರು: ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದ್ದು, ಹೇಗಪ್ಪ ಮನೆ ಮುಟ್ಟೋದು ಎಂದು ವಾಹನ ಸವಾರರು ತಲೆ ಕೆಡಿಸಿಕೊಂಡು ಕೆಸರಿನಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸುಂಕೇಶ್ವರಹಾಳ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ರಸ್ತೆ ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ಯಾರಿಗಾದರೂ ಆರೋಗ್ಯ ತೀವ್ರ ಹದಗೆಟ್ಟರೆ ಅಂಬುಲೆನ್ಸ್ ಸಹ ಇಲ್ಲಿಗೆ ಬರುವುದಿಲ್ಲ. ಗರ್ಭಿಣಿಯರ ಪರಸ್ಥಿತಿಯಂತೂ ಹೇಳತೀರದು. ಅಲ್ಲದೆ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಅಸಾಧ್ಯ ಎನ್ನವ ಹಾಗೆ ರಸ್ತೆ ಹದಗೆಟ್ಟಿದೆ.

WhatsApp Image 2020 09 30 at 6.59.18 PM 1

ಯಮನಾಳದಿಂದ ಗೂಗಲ್, ಗೂಗಲ್ ನಿಂದ ಸುಂಕೇಶ್ವರಹಾಳ ಸೇರಿದಂತೆ ಸುಮಾರು 45 ಕಿ.ಮೀ. ರಸ್ತೆ ವಿಪರೀತ ಹಾಳಾಗಿದೆ. ಇದೇ ಮಾರ್ಗದ ಒಟ್ಟು 95 ಕಿ.ಮೀ. ರಸ್ತೆಗೆ ಈಗಾಗಲೇ ಸುಮಾರು 118 ಕೋಟಿ ಘೋಷಣೆಯಾಗಿದೆ. ಆದರೆ ಕೋವಿಡ್ ಲಾಕ್‍ಡೌನ್ ಬಳಿಕ ಸರ್ಕಾರದಿಂದ ಆರ್ಥಿಕ ಅನುಮೋದನೆ ಸಿಗುತ್ತಿಲ್ಲ. ಸರ್ಕಾರದಲ್ಲಿ ರಸ್ತೆಗೆ ಖರ್ಚು ಮಾಡಲು ಹಣವಿಲ್ಲದ ಪರಸ್ಥಿತಿ ಬಂದಿರೋದು ವಿಪರ್ಯಾಸ. ಹೀಗಾಗಿ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಯಾವಾಗ ಆರಂಭವಾಗುತ್ತೋ ಎಂದು ಸ್ಥಳೀಯರು ಕಾಯುತ್ತಿದ್ದಾರೆ.

ಈ ಹದಗೆಟ್ಟ ರಸ್ತೆಯಿಂದಾಗಿ ರಾಮನಾಳ, ಅರಷಿಣಗಿ, ಕರ್ಕಿಹಳ್ಳಿ, ಕೊಪ್ಪರ, ಗಾಗಲ್, ಗೂಗಲ್, ಯಾಟಗಲ್, ಹೇರೂರು ಸೇರಿ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂಬರುವ ಎಲ್ಲ ಚುನಾವಣೆಗಳ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

WhatsApp Image 2020 09 30 at 6.59.19 PM

ರಸ್ತೆ ಅವ್ಯವಸ್ಥೆ ಕುರಿತು ಪಬ್ಲಿಕ್ ಟಿವಿ ಈಗಾಗಲೇ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಿದೆ. 2013ರಲ್ಲಿ ಡಿಎನ್‍ಆರ್ ಹೆಸರಿನ ಖಾಸಗಿ ಕಂಪನಿಗೆ ರಸ್ತೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ ಕಾಮಗಾರಿ ಆರಂಭಿಸಿ ಕೆಲವೇ ದಿನಗಳಲ್ಲಿ ಕಂಪನಿ ಬಿಲ್ ಮೊತ್ತ ಬಿಡುಗಡೆಯಾಗುತ್ತಿಲ್ಲ ಎಂದು ಕಾಮಗಾರಿ ನಿಲ್ಲಿಸಿತು. ಅಲ್ಲಿಂದ ಇಲ್ಲಿಯವರೆಗೆ ಕನಿಷ್ಟ ಮಟ್ಟದ ನಿರ್ವಹಣೆಯೂ ಇಲ್ಲದೆ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಾರೀ ಸುರಿದ ಅತಿಯಾದ ಮಳೆಯಿಂದಾಗಿ ಜನ ರಸ್ತೆಗೆ ಇಳಿಯದಂತಹ ಪರಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನ ಸಿಟ್ಟಿಗೆದ್ದಿದ್ದು, ನಿರಂತರ ಹೋರಾಟಕ್ಕೆ ಮುಂದಾಗುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

WhatsApp Image 2020 09 30 at 6.59.18 PM

ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಈ ಕುರಿತು ಪ್ರತಿಕ್ರಿಯಿಸಿ, ನಾನು ಪ್ರಯತ್ನ ಮಾಡುತ್ತಿದ್ದೇನೆ, ಕಾಮಗಾರಿಗೆ ಶೀಘ್ರದಲ್ಲೇ ಆರ್ಥಿಕ ಅನುಮೋದನೆ ಸಿಗುವ ಭರವಸೆಯಿದೆ. ಕೋವಿಡ್ ಲಾಕ್‍ಡೌನ್ ಬಳಿಕ ರಸ್ತೆ ಕಾಮಗಾರಿ ಹಣ ಬಿಡುಗಡೆಯಾಗುವುದು ಕಷ್ಟಕರವಾಗಿದೆ. ಆರ್ಥಿಕ ಇಲಾಖೆ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *