– ನಾನು ಸಂಕಷ್ಟದಲ್ಲಿದ್ದೀನಿ
– ಸಾಯುವ ಮುನ್ನ ಸ್ನೇಹಿತರಿಗೆ ರಕ್ತದ ಫೋಟೋ ಶೇರ್
ಚಿಕ್ಕಮಗಳೂರು: ಫೇಸ್‍ಬುಕ್, ವಾಟ್ಸಪ್ ಮತ್ತು ಇನ್ಟಾಗ್ರಾಂ ಅಂತ ಸೋಶಿಯಲ್ ಮೀಡಿಯಾದಲ್ಲಿ ಸದಾ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡು ಸಕ್ರಿಯವಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿಂಧು (19) ಮೃತ ಯುವತಿ. ಕಲ್ಯಾಣ ನಗರ ನಿವಾಸಿ ಸಿಂಧು ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನೆಯಲ್ಲೇ ಇದ್ದಳು. ಸಿಂಧು ಮನೆಯಲ್ಲಿ ಸುಮ್ನೆ ಇರುತ್ತಿರಲಿಲ್ಲ. ಸದಾ ಲವಲವಿಕೆಯಿಂದ ಇರುತ್ತಿದ್ದಳು. ತನ್ನ ತುಂಟಾಟದ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಮಿಂಚುತ್ತಿದ್ದಳು. ಹಾಗಾಗಿ ಟಿಕ್‍ಟಾಕ್ ಸೇರಿದಂತೆ ಅನೇಕ ಆ್ಯಪ್‍ಗಳನ್ನ ಬಳಸಿಕೊಂಡು ವಿಡಿಯೋ ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಸಿಂಧುವಿನ ವಿಡಿಯೋಗಳೇ ಆಕೆ ಸಾವಿನ ಹಿಂದೆ ಯಾರೋ ಇದ್ದಾರೆ ಅನ್ನೋ ಬಲವಾದ ಅನುಮಾನಗಳನ್ನ ಹುಟ್ಟಾಕಿವೆ. ತನಗಾಗಿರುವ ನೋವುಗಳ ವಿಡಿಯೋಗಳನ್ನೂ ಕೂಡ ಯುವತಿ ತನ್ನ ಸ್ನೇಹಿತರಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಯುವತಿಯ ಮೃತದೇಹವನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ತಂದಿದ್ದ ಆಕೆಯ ಪೋಷಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಮಗಳು ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ ಅಂತ ಮೃತ ಸಿಂಧು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆಗೂ ಮುನ್ನ ತನ್ನ ತಲೆಗೆ ಪೆಟ್ಟು ಬಿದ್ದಿದ್ದು, ನಾನು ಸಂಕಷ್ಟದಲ್ಲಿದ್ದೀನಿ ಎಂದು ಸ್ನೇಹಿತರಿಗೆ ತನ್ನ ತಲೆ ಹಾಗೂ ಕಿವಿಯಿಂದ ರಕ್ತ ಸೋರುತ್ತಿರುವ ಫೋಟೋಗಳನ್ನ ಶೇರ್ ಮಾಡಿದ್ದಾಳೆ. ಈ ಫೋಟೋಗಳೇ ಈಗ ತೀವ್ರ ಅನುಮಾನಕ್ಕೆ ಕಾರಣವಾಗಿವೆ. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿಯ ತಲೆಯಲ್ಲಿ ರಕ್ತ ಹೇಗೆ ಬಂತು ಎಂಬ ಅನುಮಾನ ಮೂಡಿದೆ. ಹೀಗಾಗಿ ಈ ಕುರಿತು ತನಿಖೆ ಮಾಡಲಾಗುತ್ತದೆ ಎಂದು ಎಸ್‍ಪಿ ಅಕ್ಷಯ್ ಹೇಳಿದ್ದಾರೆ.
ಸದ್ಯಕ್ಕೆ ಕಾಫಿನಾಡ ನಗರ ಪೊಲೀಸರು ಇದು ಆತ್ಮಹತ್ಯೆ ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಯುವತಿ ತಲೆಗೆ ಆಗಿರುವ ಗಾಯ ಹೇಗಾಯಿತು ಅನ್ನೋದು ನಿಗೂಢವಾಗಿದೆ.