ಬೆಂಗಳೂರು: ವಿರೋಧ ಪಕ್ಷಗಳು ಪ್ರತಿ ಆರು ತಿಂಗಳಿಗೆ ಒಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲಿ. ಅದರಿಂದ ನನಗೂ ವಿಶ್ವಾಸ ಬರುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್ ವೈ, ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ನವರು ಹೀಗೆ ಮಾಡುತ್ತಾ ಇರಲಿ. ಹೀಗೆ ಮಾಡುದರಿಂದ ನನಗೆ ಆರು ತಿಂಗಳ ಕಾಲ ವಿಶ್ವಾಸ ಬರುತ್ತೆ. ನನಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದೆ. ಇದಕ್ಕೆ ಕಾಂಗ್ರೆಸ್‍ನ 23 ಶಾಸಕರು ಎದ್ದು ನಿಂತು ಬೆಂಬಲ ಸೂಚಿಸಿದ್ದು, ಹೀಗಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಕೋರಂ ಇದೆ ಎಂದ ಸ್ಪೀಕರ್ ಕಾಗೇರಿ, ಇಂದು ಅಥವಾ ನಾಳೆ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಯಾವುದೇ ಬಿಲ್ ಪಾಸ್ ಮಾಡದಂತೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಇದೇ ವೇಳೆ ರೈತ ಸಂಘಟದ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ವೈ, ಮಧ್ಯಾಹ್ನ ರೈತ ಸಂಘದ ಮುಖಂಡರನ್ನು ಭೇಟಿಯಾಗುವಂತೆ ಹೇಳಿದ್ದೇನೆ. ಈ ವರೆಗೆ ಕೈಗಾರಿಕೆಗೆ ಶೇ.2 ರಷ್ಟು ಭೂಮಿಯನ್ನು ಮಾತ್ರ ಬಳಸಲಾಗುತ್ತಿದೆ. ಆದರೆ ನೀರಾವರಿಯ ಭೂಮಿಯನ್ನು ಯಾರೇ ಖರೀದಿ ಮಾಡಿದರೂ ರೈತರಿಗೆ ಯಾವುದೇ ತೊಂದರೆ ಆಗಲ್ಲ. ಆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.