– ಭಾರೀ ಮಳೆಗೆ ಬಿರುಕು ಬಿಟ್ಟ ಮನೆ ಗೋಡೆ
ಮಡಿಕೇರಿ: ಕೊಡಗಿನಲ್ಲಿ ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದ ಜನರ ಜೀವನ ಅಸ್ತವ್ಯಸ್ತಗೊಂದಿದೆ.
ಒಂದೆಡೆ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನೊಂದೆಡೆ ತಾಲೂಕಿನ ಗ್ರಾಮೀಣ ಭಾಗದ ಹಲವು ಮನೆಗಳು ಧರೆಗುರುಳಿವೆ.
ಸೋಮವಾರಪೇಟೆ ನಗರ ಸಮೀಪದ ಕಲ್ಕಂದೂರು ಬಾಣೆಯ ನಿವಾಸಿ ಅಬ್ಬಾಸ್ ಎಂಬುವವರ ವಾಸದ ಮನೆ ಮೊನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸಂಪೂರ್ಣ ನೆಲಸಮವಾಗಿದೆ. ಮುಂಜಾನೆ 3.30ರ ವೇಳೆ ಜೋರಾಗಿ ಶಬ್ದ ಕೇಳಿಸಿತೆಂದು ಮನೆಯಲ್ಲಿದ್ದ ನಾಲ್ವರು ಮನೆಯಿಂದ ಹೊರಗೆ ಬಂದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ, ಪೀಠೋಪಕರಣ ಸೇರಿದಂತೆ ಹಲವು ಸಾಮಾಗ್ರಿಗಳು ನಾಶವಾಗಿದೆ.
ತಾಲೂಕಿನ ತೋಳುರುಶೆಟ್ಟಳ್ಳಿ ಸಮೀಪದ ಸುಭಾಷ್ ನಗರದ ಟಿ.ಎನ್.ಸುರೇಶ್ ಎಂಬುವವರ ಮನೆಯ ಗೋಡೆ ಭಾರೀ ಮಳೆಗೆ ಕುಸಿದಿದ್ದು, ಕೆಲವೆಡೆ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ಜಿಲ್ಲೆಯಲ್ಲಿ ಮಳೆ ಇಳಿಮುಖವಾದರೂ ಮಳೆಯ ಅವಾಂತರಗಳು ಮಾತ್ರ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ.