ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ

Public TV
2 Min Read
MS Dhoni 5

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಅಂಪೈರ್ ಗಳ ತೀರ್ಪಿನ ವಿವಾದಗಳು ಮುಂದುವರಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ನಡೆದ ಘಟನೆ ಅಂಪೈರಿಂಗ್ ಕುರಿತ ಚರ್ಚೆಗೆ ಮತ್ತೊಮ್ಮೆ ಕಾರಣವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ನಿರ್ಧಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ ಅಂಪೈರ್ ನಿರ್ಧಾರ ಕುರಿತು ಮ್ಯಾಚ್ ರೆಫ್ರಿರಿಗೆ ದೂರು ನೀಡಿತ್ತು. ಇಂತಹದ್ದೇ ಘಟನೆ ನಿನ್ನೆಯ ಪಂದ್ಯದಲ್ಲೂ ನಡೆದಿದೆ.

MS Dhoni 4

ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್ ನ 18ನೇ ಓವರ್ ನ ದೀಪಕ್ ಚಹರ್ ಬೌಲಿಂಗ್‍ನಲ್ಲಿ ಟಾಮ್ ಕರ್ರನ್ ವಿಕೆಟ್ ಕೀಪರ್‍ಗೆ ಕ್ಯಾಚ್ ನೀಡಿದ್ದರು. ಈ ವೇಳೆ ಕ್ಯಾಚ್ ಪಡೆದ ಧೋನಿ ಅಂಪೈರ್ ಗೆ ಔಟ್ ಮನವಿ ಮಾಡಿದ್ದರು. ಈ ಮನವಿಯನ್ನು ಸ್ವೀಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ತೀರ್ಮಾನದಿಂದ ಶಾಕ್‍ಗೆ ಒಳಗಾದ ಬ್ಯಾಟ್ಸ್ ಮನ್ ತೀರ್ಪು ಮರುಪರಿಶೀಲನೆ ಮಾಡಲು ಮನವಿ ಮಾಡಿದ್ದರು. ಆದರೆ ಅದಾಗಲೇ ಇದ್ದ ರಿವ್ಯೂ ಅವಕಾಶವನ್ನು ರಾಜಸ್ಥಾನದ ತಂಡದ ರಾಹುಲ್ ತಿವಾಟಿಯಾ ಬಳಸಿಕೊಂಡಿದ್ದ ಕಾರಣ ಅಂಪೈರ್ ಬ್ಯಾಟ್ಸ್ ಮನ್ ಕರ್ರನ್ ಅವರನ್ನು ಹೊರ ನಡೆಯುವಂತೆ ಸೂಚಿಸಿದ್ದರು. ಇದನ್ನೂ ಓದಿ: ಸಿಎಸ್‍ಕೆಗೆ ಮೊದಲ ಸೋಲು – ಕ್ರೀಸ್‌‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡುʼಪ್ಲೆಸಿಸ್ ಅಬ್ಬರ ವ್ಯರ್ಥ 

Dhoni csk

ಆದರೆ ತಕ್ಷಣ ತೀರ್ಪು ಮರುಪರಿಶೀಲನೆ ಮಾಡಲು ನಿರ್ಧರಿಸಿದ್ದ ಅಂಪೈರ್, ಕ್ಯಾಚ್ ಕಂಪ್ಲೀಟ್ ಆಗಿದೆಯಾ ಎಂದು ಮೂರನೇ ಅಂಪೈರ್ ಸಹಾಯ ಕೋರಿದ್ದರು. ಈ ವೇಳೆ ರಿಪ್ಲೇನಲ್ಲಿ ಕ್ಯಾಚ್ ಪಡೆಯುವ ಮುನ್ನವೇ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿತ್ತು. ಪರಿಣಾಮ ತಮ್ಮ ತೀರ್ಪನ್ನು ಬದಲಿಸಿದ ಅಂಪೈರ್ ಟಾಮ್ ಕರ್ರನ್‍ರನ್ನು ನಾಟೌಟ್ ಎಂದು ತಿಳಿಸಿ ಬ್ಯಾಟಿಂಗ್ ಮುಂದುವರಿಸಲು ಸೂಚಿಸಿದ್ದರು.

ನಿಯಮಗಳ ಅನ್ವಯ ಆನ್‍ಫೀಲ್ಡ್ ಅಂಪೈರ್ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಮುನ್ನವೇ ಸಂದೇಹವಿದ್ದರೇ 3ನೇ ಅಂಪೈರ್ ನೆರವು ಪಡೆಯಬೇಕು. ತೀರ್ಪು ನೀಡಿದ ಬಳಿಕ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಚೆನ್ನೈ ಆಟಗಾರರ ವಾದವಾಗಿತ್ತು.

sakshi dhoni a

ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಂಪೈರ್ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಅಂಪೈರ್ ಜೊತೆ ಧೋನಿ ಕೆಲ ಸಮಯದ ವಾದವನ್ನು ನಡೆಸಿದ್ದರು. ಇತ್ತ ಅಂಪೈರ್ ತೀರ್ಮಾನದ ಕುರಿತು ಧೋನಿ ಪತ್ನಿ ಸಾಕ್ಷಿ ಕೂಡ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ನೀವು ತಂತ್ರಜ್ಞಾನ ಬಳಸುತ್ತಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ. ಔಟ್ ಎಂದ್ರೇ ಔಟ್ ಅಷ್ಟೇ, ಅದು ಕ್ಯಾಚ್ ಆದ್ರೂ ಎಲ್‍ಬಿಡಬ್ಲ್ಯೂ ಆದ್ರೂ ಎಂದು ಹೇಳಿದ್ದರು. ಆದರೆ ಕೆಲ ಸಮಯದ ಬಳಿಕ ಈ ಟ್ವೀಟ್‍ನ್ನು ಸಾಕ್ಷಿ ಡಿಲೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *