ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಸರ್ವಾಧಿಕಾರಿ ಮನೋಭಾವವನ್ನು ಬಿಡಲೇಬೇಕು ಎಂದು ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ ಅವರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ಅರಕಲಗೂಡಿನಲ್ಲಿ ಮಾತನಾಡಿದ ಅವರು, ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚಿನ ಕೆಲವು ವಿದ್ಯಮಾನಗಳು ನನ್ನನ್ನು ಘಾಸಿಗೊಳಿಸಿವೆ. ಹೀಗಾದರೆ ಪಕ್ಷ ಸಂಘಟನೆ ಕಾರ್ಯ ಸಾಧ್ಯವಿಲ್ಲ ಎಂದು ತಮ್ಮ ಪಕ್ಷದ ಶಾಸಕರ ಮೇಲೆಯೇ ಎಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ ಹಾಲು ಒಕ್ಕೂಟಕ್ಕೆ ಹೊನ್ನವಳ್ಳಿ ಸತೀಶ್ ಎಂಬುವವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನೇ ಬೆಂಬಲಿಸಿದ್ದು ಬಹಳ ಆಘಾತಕಾರಿ ವಿಷಯ. ಅವರು ಎಲ್ಲ ಚುನಾವಣೆಯಲ್ಲೂ ಪಕ್ಷಕ್ಕೆ ವಿರೋಧವಾಗಿ ಕೆಲಸ ಮಾಡಿದ್ದಾರೆ. ಸತೀಶ್ ಹಣ ಇದ್ದವರ ಜೊತೆ ಹೋಗಿ ಬೆಂಬಲ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬೆಂಬಲಿಸಿದರೆ ತಾಯಿಯೇ ಮಗುವಿಗೆ ವಿಷ ಕೊಟ್ಟಂತೆ ಆಗುತ್ತೆ. ಆಗ ಮಗು ಹೇಗೆ ಬದುಕುತ್ತೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಪಕ್ಷದ ವರಿಷ್ಠರಾದ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಹೆಚ್‍ಡಿ.ರೇವಣ್ಣ ಅವರ ಬಳಿ ಈ ಹಿಂದಯೇ ಈ ವಿಚಾರವಾಗಿ ಮಾತನಾಡಿದ್ದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪರಿಗಣಿಸಬೇಡಿ ಎಂದರೂ ಅವರನ್ನೇ ಪರಿಗಣಿಸಿದ್ದಾರೆ. ಶಾಸಕನಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಇದು ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ. ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು. ಮುಂದಿನ ಸಂಘಟನೆ ಜವಾಬ್ದಾರಿ ವರಿಷ್ಠರಿಗೆ ಬಿಡುತ್ತೇನೆ ಎಂದಿದ್ದಾರೆ.