ಧಾರವಾಡ: ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ನಡೆದಿದೆ.
ಅಣ್ಣಿಗೇರಿ ತಾಲೂಕಿನ ಕಿತ್ತೂರು ಗ್ರಾಮದ ಅಶೋಕ್ ಸೋಮರೆಡ್ಡಿ ಎನ್ನುವ ಯುವಕ ಬೈಕ್ ಮೇಲೆ ಹಂದಿಗ್ಯಾನ ಸೇತುವೆ ದಾಟುತ್ತಿದ್ದ. ಈ ವೇಳೆ ನೀರಿನ ರಭಸಕ್ಕೆ ಈತ ಸೇತುವೆ ಮೇಲಿನಿಂದ ನೀರಿನಲ್ಲೆ ಕೊಚ್ಚಿ ಹೋಗುತ್ತಿದ್ದ. ಸ್ಥಳದಲ್ಲೇ ಇದ್ದ ಕೆಲವರು ಈತನನ್ನ ನೋಡಿ ರಕ್ಷಣೆ ಮಾಡಿದ್ದಾರೆ.
ಸೇತುವೆ ಮೇಲೆ ನೀರಿನ ರಭಸ ಹೆಚ್ಚಿದ್ರೂ ಬೈಕ್ ಸವಾರ ಹುಚ್ಚು ಸಾಹಸವನ್ನ ಮಾಡಲು ಹೋಗಿದ್ದಾನೆ. ಅಲ್ಲೇ ಇದನ್ನು ನೋಡುತ್ತಿದ್ದ ಜನರು ತಕ್ಷಣ ಎಚ್ಚರಗೊಂಡಿದ್ದರಿಂದ ಬೈಕ್ ಸವಾರನ ಜೀವ ಉಳಿದಿದೆ. ಕಳೆದ ರಾತ್ರಿ ಗದಗ ಜಿಲ್ಲೆಯಲ್ಲಿ ಸುರಿದ ಮಳೆಗೆ ನಾವಳ್ಳಿ ಗ್ರಾಮದ ಹಂದಿಗ್ಯಾನ ಹಳ್ಳಕ್ಕೆ ನೀರು ಬಂದಿತ್ತು. ಈ ಹಿನ್ನೆಲೆ ಧಾರವಾಡ ಜಿಲ್ಲೆಯ ಹಲವು ಸೇತುವೆಗಳ ಮೇಲೆ ನೀರು ಬಂದಿತ್ತು.