ಬಳ್ಳಾರಿ: ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೊಸ ಸುಳಿವು ನೀಡಿದ್ದಾರೆ.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಂದು ನಡೆದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನ ನಾವೆಲ್ಲರೂ ಅಣ್ಣ, ತಮ್ಮಂದಿರಂತೆ ಒಟ್ಟಿಗೆ ಇದ್ದೇವೆ ಎಂದರು.
ನಮ್ಮಣ್ಣ ಇಲ್ಲೇ ಇದ್ದಾರೆ. ಅಣ್ಣ ಹೇಳಿದಂತೆ ನಾನು ಕೇಳುತ್ತೇನೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಅವರು ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರಿಗೆ ಕೈಮುಗಿದು ನಗು ಬೀರಿದರು. ಆ ಮೂಲಕ ಪರೋಕ್ಷವಾಗಿ ಸೋಮಶೇಖರ್ ರೆಡ್ಡಿ ಅವರು ಸಹ ಜಿಲ್ಲೆ ಪ್ರತ್ಯೇಕ ಮಾಡುವ ಕುರಿತು ಒಪ್ಪಿಗೆ ನೀಡಿದ್ದಾರೆ ಎಂದು ಸುಳಿವು ನೀಡಿದರು.
ಡ್ರಗ್ಸ್ ಮಾಫಿಯಾದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಬಂದಿದೆ. ಆದ್ದರಿಂದ ರಾಜ್ಯದ 13 ವಲಯಗಳಿಗೂ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವುದು ಕಂಡು ಬಂದರೇ ಕಠಿಣ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದೇವೆ. ಆದರೆ ಇದುವರೆಗೂ ಅಂತಹ ಯಾವುದೇ ವರದಿಗಳು ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಸಿಎಂ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟದ ವಿಸ್ತರಣೆ ಸಲುವಾಗಿಯೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ನೀಡುತ್ತಿಲ್ಲ. ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಕೆಲ ಯೋಜನೆಗಳ ಬಗ್ಗೆ ಪ್ರಧಾನಿಗಳು ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡುತ್ತಾರೆ. ನೆರೆಹಾವಳಿ ಪರಿಹಾರಕ್ಕಾಗಿ ಮನವಿ ಮಾಡುತ್ತಾರೆ ಎಂದರು. ಅಲ್ಲದೇ ರಾಜ್ಯ ಸಚಿವ ಸಂಪುಟದ ವಿಸ್ತರಣೆ ವಿಚಾರವಾಗಿ ಸಿಎಂ ಬಿಎಸ್‍ವೈ ದೆಹಲಿಯ ಭೇಟಿ ವೇಳೆ ಚರ್ಚೆ ಮಾಡಲಿ ಬಿಡಿ ಎಂದರು.