370ನೇ ವಿಧಿ ರದ್ದತಿ ಬಳಿಕ ಜಮ್ಮು ಕಾಶ್ಮೀರದಲ್ಲಿ ಶೇ.54ರಷ್ಟು ಉಗ್ರ ಚಟುವಟಿಕೆ ಇಳಿಕೆ

Public TV
3 Min Read
crpf 2

– ಭಾರೀ ಪ್ರಮಾಣದಲ್ಲಿ ತಗ್ಗಿದ ಉಗ್ರರ ಉಪಟಳ
– ನಿಟ್ಟುಸಿರು ಬಿಟ್ಟ ಜಮ್ಮು ಕಾಶ್ಮೀರದ ಜನತೆ
– ಕರ್ನಾಟಕ, ಕೇರಳ ಸೇರಿ ದಕ್ಷಿಣ ರಾಜ್ಯಗಳಲ್ಲೂ ಉಗ್ರರು ಸಕ್ರಿಯ

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಉಗ್ರ ಚಟುವಟಿಕೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಶೇ.54ರಷ್ಟು ಭಯೋತ್ಪಾದಕ ಚಟುವಟಿಕೆ ತಗ್ಗಿವೆ.

ಈ ಕುರಿತು ಸ್ವತಃ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಆಗಸ್ಟ್ 5, 2019ರಿಂದ 2020ರ ಸೆಪ್ಟೆಂಬರ್ 9 ವರೆಗೆ 211 ಭಯೋತ್ಪಾದಕ ಸಂಬಂಧಿ ಘಟನೆಗಳು ಸಂಭವಿಸಿವೆ. 2018 ಹಾಗೂ 2019ರಲ್ಲಿ ಇದೇ ಅವಧಿಯಲ್ಲಿ 455 ಪ್ರಕರಣಗಳು ನಡೆದಿದ್ದವು. ಕಳೆದ ಬಾರಿ ಹಾಗೂ ಈ ಬಾರಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹೋಲಿಸಿದರೆ ಶೇ.54ರಷ್ಟು ಕಡಿಮೆಯಾಗಿವೆ ಎಂದು ಮಾಹಿತಿ ನೀಡಿದರು.

g kishan reddy

ಆಗಸ್ಟ್ 5, 2019 ರಿಂದ ಸೆಪ್ಟೆಂಬರ್ 9,2020ರ ವರೆಗೆ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ ನಡೆದಿಲ್ಲ. ಭಯೋತ್ಪಾದನೆ ವಿರುದ್ಧ ಸರ್ಕಾರ ಝೀರೋ ಟಾಲರೆನ್ಸ್ ಪಾಲಿಸಿಯನ್ನು ಅಳವಡಿಸಿಕೊಂಡಿದ್ದು, ಇದರ ಭಾಗವಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭದ್ರತಾ ಉಪಕರಣಗಳನ್ನು ಹೆಚ್ಚಿಸುವುದು, ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಕಟ್ಟು ನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವುದು. ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಭಯೋತ್ಪಾದಕರನ್ನ ಶೋಧ ಕಾರ್ಯ, ಸಂಶಯಾಸ್ಪದ ಪ್ರದೇಶಗಳನ್ನು ಸುತ್ತುವರಿದು ಉಗ್ರರು ಪತ್ತೆಹಚ್ಚುವುದು ಸೇರಿದಂತೆ ವಿವಿಧ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಜಮ್ಮು ಕಾಶ್ಮೀರದಾದ್ಯಂತ ಕೈಗೊಳ್ಳಲಾಗಿದೆ ಎಂದರು.

jk 5 terrorists neutralized in shopian encounter operation underway

ಭದ್ರತಾ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಯೋತ್ಪಾದಕರಿಗೆ ಬೆಂಬಲ ನೀಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ಒಳನುಸುಳಿರುವ ಕುರಿತ ವಿವರಗಳನ್ನೂ ರೆಡ್ಡಿ ನೀಡಿದ್ದಾರೆ.

ಜುಲೈ 2020ರ ವರೆಗೆ 47 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಇದೇ ಸಂದರ್ಭದಲ್ಲಿ ಈ ಪ್ರಕರಣಗಳು 219 ಆಗಿದ್ದವು. 2018ರಲ್ಲಿ 328 ಒಳ ನುಸುಳುವಿಕೆ ಪ್ರಕರಣಗಳು ಪತ್ತೆಯಾಗಿದ್ದವು. ಜುಲೈ 2020ರ ವರೆಗೆ ಅಂದಾಜು 28 ಒಳನುಸುಳುವಿಕೆ ಪ್ರಕರಣಗಳು ನಡೆದಿವೆ. 2019ರಲ್ಲಿ ಇದರ ಪ್ರಮಾಣ 141 ಇತ್ತು. ಅಲ್ಲದೆ 2018ರಲ್ಲಿ 143 ಪ್ರಕಣಗಳು ಸಂಭವಿಸಿದ್ದವು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

terrorists

ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳಲ್ಲಿ 45 ಸಾರ್ವಜನಿಕರು ಸಾವಿಗೀಡಾಗಿದ್ದು, 49 ಭದ್ರತಾ ಸಿಬ್ಬಂದಿ ಸಹ ಹುತಾತ್ಮರಾಗಿದ್ದಾರೆ ಎಂದು ವಿವರಿಸಿದರು.

ಇಷ್ಟು ಮಾತ್ರವಲ್ಲದೆ ಜಮ್ಮು ಕಾಶ್ಮೀರದ ಅಭಿವೃದ್ಧಿ ಕಡೆಗೂ ಒತ್ತು ನಿಡಿದ್ದು, ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015ರ ಅಡಿ ಪ್ರಧಾನಿ ನರೇಂದ್ರ ಮೋದಿ 80,068 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಈ ಹಣದಲ್ಲಿ 63 ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ, ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು, ಆರೋಗ್ಯ ವಲಯದ ಮೂಲಭೂತ ಸೌಲಭ್ಯಗಳು, 2 ಏಮ್ಸ್, ಐಐಟಿ, ಐಐಎಂ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸಭೆಗೆ ಸಚಿವ ರೆಡ್ಡಿ ತಿಳಿಸಿದರು.

terrorist 2

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿರುವ ಕುರಿತು ಸಂಸತ್‍ನಲ್ಲಿ ಘೋಷಿಸಿದ್ದರು. ನಂತರ ಜಮ್ಮು ಹಾಗೂ ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ್ದರು.

ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ತುಂಬಾ ಸಕ್ರಿಯವಾಗಿದ್ದು, ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಐಎಸ್ ಉಗ್ರರ ಕೃತ್ಯದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) 17 ಪ್ರಕರಣಗಳನ್ನು ದಾಖಲಿಸಿದೆ. ಮಾತ್ರವಲ್ಲದೆ 122 ಆರೋಪಿಗಳನ್ನು ಸಹ ಬಂಧಿಸಿದೆ ಎಂದು ಅವರು ತಿಳಿಸಿದರು.

c5blmgg terror attack in

ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳು ನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಜಮ್ಮು ಕಾಶ್ಮೀರ ಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಎಂಬುದು ತನಿಖೆಯಿಂದ ತಿಳಿದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *