15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

Public TV
2 Min Read
klr agrahara lake

– ರಮೇಶ್ ಕುಮಾರ್ ಸೇರಿ ಮೂರು ಪಕ್ಷದ ಗಣ್ಯರಿಂದ ಬಾಗಿನ ಅರ್ಪಣೆ

ಕೋಲಾರ: ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ. ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಬೀಡು ಬಿಟ್ಟಿದೆ.

vlcsnap 2020 09 14 16h41m11s042

ಮಳೆಯಿಂದಾಗಿ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 15 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ.

vlcsnap 2020 09 14 16h41m48s244

ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1,200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಹರಿದು ಬರುತ್ತಿದ್ದಾರೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

vlcsnap 2020 09 14 16h39m08s147

ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆ.ಸಿ.ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 75 ಕೆರೆಗಳು ತುಂಬಿವೆ. ಆದರೆ ಜಿಲ್ಲೆಯ ಅತಿ ದೊಡ್ಡ ಎಸ್.ಆಗ್ರಹಾರ ಕೆರೆ ತುಂಬಿದ್ದು ಜಿಲ್ಲೆಯ ಜನರಲ್ಲಿ ಪರಮಾನಂದವನ್ನುಂಟು ಮಾಡಿದೆ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿತ್ತು.

vlcsnap 2020 09 14 16h40m55s226

ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ ಅಗ್ರಹಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಮುಖಂಡರು ಇದೊಂದು ಸುಂದರ ಪ್ರವಾಸಿ ತಾಣವಾಗಿಸಿ ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿ ಎಂದರು.

vlcsnap 2020 09 14 16h41m03s217

ಬರದ ನಾಡು ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ. ಜನರು ಕೂಡಾ ಯೋಜನೆಯಿಂದಾಗುತ್ತಿರುವ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಹಣೆ ಪಟ್ಟಿ ಕಳಚಲಿ ಅನ್ನೋದು ಜನರ ಮಾತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *