– 1,350 ಕೆಜಿ ಗಾಂಜಾ ಸಿಕ್ಕ ಪ್ರಕರಣದ ಕುರಿತು ಟ್ವೀಟ್
ಕಲಬುರಗಿ: ಜಿಲ್ಲೆಯನ್ನು ಅಕ್ರಮ ಚಟುವಟಿಕೆ ತಾಣ ಮಾಡಿದ್ದಕ್ಕೆ ಬಿಜೆಪಿಗೆ ಅಭಿನಂದನೆಗಳು ಎಂದು ಪ್ರಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಗಾಂಜಾ ಸಿಕ್ಕಿದ್ದ ಇತ್ತೀಚಿನ ಪ್ರಕರಣದ ಕುರಿತು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ. ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು, ಕಲಬುರಗಿಯನ್ನು ಅಕ್ರಮ ಚಟುವಟಿಕೆಗಳ ತಾಣ ಮಾಡಿ, ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನು (ಕು)ಖ್ಯಾತಿಗೊಳಿಸುತ್ತಿರುವ ಬಿಜೆಪಿಗೆ ‘ಅಭಿನಂದನೆಗಳು’. ಕಲಬುರಗಿಯ ಜನತೆ ನಿಮ್ಮ ಈ ‘ಸಾಧನೆ’ಯನ್ನ ಎಂದಿಗೂ ಮರೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲೇ ಅಪಾರ ಪ್ರಮಾಣದ ಗಾಂಜಾವಾವನ್ನು ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ವಶಪಡಿಸಿಕೊಳ್ಳುತ್ತಿದ್ದು, ಅದರಂತೆ ಈ ಹಿಂದೆ ಕಲಬುರಗಿಯಲ್ಲಿ 4 ಕೋಟಿ ರೂ. ಮೌಲ್ಯದ 1,350 ಕೆ.ಜಿ. ಗಾಂಜಾವನ್ನು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದರು. ಪ್ರಕಣವನ್ನು ಬೇಧಿಸಿದ್ದಕ್ಕೆ ಪೊಲೀಸರಿಗೆ 2 ಲಕ್ಷ ರೂ.ಪರಿಹಾರವನ್ನೂ ಘೋಷಿಸಿರುವುದಾಗಿ ಐಜಿಪಿ ಕಮಲ್ ಪಂತ್ ಟ್ವೀಟ್ ಮೂಲಕ ತಿಳಿಸಿದ್ದರು. ಈ ಪ್ರಕರಣವನ್ನು ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಕುಟುಕಿದ್ದಾರೆ.
ಒಡಿಶಾದಿಂದ ಗಾಂಜಾವನ್ನು ತರಿಸಲಾಗುತ್ತಿತ್ತು. ತೆಲಂಗಾಣ ಮಾರ್ಗವಾಗಿ ಗಾಂಜಾ ಕರ್ನಾಟಕವನ್ನು ಪ್ರವೇಶಿಸುತ್ತಿತ್ತು. ತರಕಾರಿ ವಾಹನಗಳಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು ಎಂದು ಈ ಹಿಂದೆ ಪತ್ತೆಯಾದ 1350 ಕೆಜಿ ಗಾಂಜಾ ಕುರಿತ ತನಿಖೆ ವೇಳೆ ಪೊಲೀಸರು ಪತ್ತೆಹಚ್ಚಿದ್ದರು.