ಡ್ರಗ್ಸ್‌ ನಟಿಯರಿಗೆ ಹೇರ್ ಫೋಲಿಕಲ್ ಟೆಸ್ಟ್‌ – ಏನಿದು ಟೆಸ್ಟ್‌? ನಿಖರ ಹೇಗೆ?

Public TV
3 Min Read
laboratory Hair test drug test

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಮತ್ತು ಸಂಜನಾ ಅವರಿಗೆ ಇಂದು ಹೇರ್ ಫೋಲಿಕಲ್  ಟೆಸ್ಟ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡ್ರಗ್ಸ್‌ ತೆಗೆದುಕೊಂಡಿದ್ದಾರಾ ಇಲ್ಲವೋ ಎನ್ನುವುದು ವೈದ್ಯಕೀಯವಾಗಿಯೂ ಸಾಬೀತಾಗಬೇಕು. ಹೀಗಾಗಿ ಇಂದು ಬೆಳಗ್ಗೆ ಇವರಿಬ್ಬರನ್ನು ಕೆಸಿ ಜನರಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಲಾಗಿದೆ.

ಕೆಲ ಕ್ರೀಡಾಪಟುಗಳು ಶಕ್ತಿ ವೃದ್ಧಿಸಲು ಸ್ಟೀರಾಯ್ಡ್‌ ಇತ್ಯಾದಿ ಡ್ರಗ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಕ್ರೀಡಾಕೂಟದ ಆರಂಭಕ್ಕೂ ಮೊದಲು ಅಥವಾ ಒಂದು ವೇಳೆ ಬಹುಮಾನ ಗೆದ್ದರೆ ಕ್ರೀಡಾಪಟುಗಳಿಗೆ ಡೋಪಿಂಗ್‌ ಟೆಸ್ಟ್‌ ಮಾಡಿಸಲಾಗುತ್ತದೆ. ಆದರೆ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು, ಎಲ್‍ಎಸ್‌ಡಿ(ಲೈಸರ್ಜಿಕ್ ಆಸಿಡ್‌ ಡೈಥೈಲಾಮೈಡ್), ಆಂಫೆಟಮೈನ್, ಗಾಂಜಾ, ಕೊಕೇನ್ ಸೇವಿಸಿದ್ದರೆ ಅದನ್ನು ಪತ್ತೆ ಹಚ್ಚಲು ಹೇರ್‌ ಫೋಲಿಕಲ್‌ ಪರೀಕ್ಷೆ ಮಾಡುತ್ತಾರೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

Hair Follicle Drug Test

ಹೇರ್‌ ಫೋಲಿಕಲ್‌ ಪರೀಕ್ಷೆ ಯಾಕೆ?
ಕ್ರೀಡಾಕೂಟದ ಸಮಯದಲ್ಲಿ ಕ್ರೀಡಾಪಟುಗಳಿಗೆ ಮೂತ್ರ ಪರೀಕ್ಷೆಯನ್ನು ಮಾಡುತ್ತಾರೆ. ಈ ಮೂತ್ರ ಪರೀಕ್ಷೆಯಲ್ಲಿ ಮೂರು ದಿನದ ಹಿಂದೆ ಡ್ರಗ್ಸ್‌ ಸೇವಿಸಿದರೆ ಮಾತ್ರ ತಿಳಿಯುತ್ತದೆ. ಆದರೆ ಹೇರ್‌ ಫೋಲಿಕಲ್‌ ಪರೀಕ್ಷೆಯಲ್ಲಿ 90 ದಿನದ ಹಿಂದೆ ಡ್ರಗ್ಸ್‌ ಸೇವಿಸಿದರೂ ತಿಳಿಯುತ್ತದೆ.

ಎಷ್ಟು ಕೂದಲು ತೆಗೆಯುತ್ತಾರೆ?
ಆಸ್ಪತ್ರೆ ಮತ್ತು ಲ್ಯಾಬ್‌ಗಳಲ್ಲಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ವೈದ್ಯರು ತಲೆಯ ವಿವಿಧ ಕಡೆಗಳಿಂದ 100-120 ಕೂದಲನ್ನು ಕತ್ತರಿಸಿ ಸಂಗ್ರಹಿಸುತ್ತಾರೆ. ಬಳಿಕ ಅದನ್ನು ಲ್ಯಾಬ್‌ಗೆ ಕಳುಹಿಸುತ್ತಾರೆ. ಒಂದು ವೇಳೆ ತಲೆಯಲ್ಲಿ ಕೂದಲು ಇರದಿದ್ದರೆ ದೇಹದಲ್ಲಿರುವ ಕೂದಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

Hair Follicle Drug Test 4

ಪರೀಕ್ಷೆ, ಫಲಿತಾಂಶ ಹೇಗೆ?
ಕೊರೊನಾ ಪಾಸಿಟಿವ್‌, ನೆಗೆಟಿವ್‌ ಆಧಾರದಲ್ಲಿ ಹೇಗೆ ನಿರ್ಧಾರ ಮಾಡಲಾಗುತ್ತದೋ ಅದೇ ರೀತಿಯಾಗಿ ಇಲ್ಲೂ ನಿರ್ಧಾರ ಮಾಡಲಾಗುತ್ತದೆ. ಒಟ್ಟು ಎರಡು ರೀತಿಯ ಪರೀಕ್ಷೆ ನಡೆಯುತ್ತದೆ. ಯಾವುದೇ ಡ್ರಗ್ಸ್‌ ಸೇವಿಸದೇ ಇದ್ದರೆ ಕೂದಲು ತೆಗೆದ 24 ಗಂಟೆಯಲ್ಲಿ ನೆಗೆಟಿವ್‌ ಬರುತ್ತದೆ. ಈ ಫಲಿತಾಂಶಕ್ಕಾಗಿ ಎಂಜೈಮ್-ಲಿಂಕ್ಡ್ ಇಮ್ಯುನೊಸರ್ಬೆಂಟ್ ಅಸ್ಸೇ (ಇಎಲ್‌ಐಎಸ್‌ಎ) ಪರೀಕ್ಷೆ ಮಾಡಲಾಗುತ್ತದೆ.

ಒಂದು ವೇಳೆ ಡ್ರಗ್ಸ್‌ ಸೇವಿಸಿದ್ದರೆ 72 ಗಂಟೆಯ ನಂತರ ಪಾಸಿಟಿವ್‌ ಬರುತ್ತದೆ. ಈ ಫಲಿತಾಂಶಕ್ಕಾಗಿ ಗ್ಯಾಸ್ ಕ್ರೊಮ್ಯಾಟೋಗ್ರಫಿ ಮಾಸ್ ಸ್ಪೆಕ್ಟ್ರೋಮೆಟ್ರಿ (ಜಿಸಿ / ಎಂಎಸ್) ಪರೀಕ್ಷೆ ಮಾಡಲಾಗುತ್ತದೆ. ಸರಿಯಾದ ಕೂದಲು ಸಂಗ್ರಹ ಅಥವಾ ಇಬ್ಬರು ವ್ಯಕ್ತಿಗಳ ಕೂದಲು ಮಿಶ್ರಣವಾದರೆ ನಿಖರ ಫಲಿತಾಂಶ ಬರುವುದಿಲ್ಲ. ಇದು ತಿರಸ್ಕೃತವಾಗಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ.

Hair Follicle Drug Test 3

ನಿಖರ ಹೇಗೆ?
ವ್ಯಕ್ತಿ ಡ್ರಗ್ಸ್‌ ಸೇವಿಸಿದರೆ ಅದು ರಕ್ತದಲ್ಲಿ ಸೇರುತ್ತದೆ. ಡ್ರಗ್ಸ್‌ನಲ್ಲಿರುವ ರಾಸಾಯನಿಕ ರಕ್ತದ ಮೂಲಕ ಕೂದಲ ಕೋಶಕ್ಕೆ ಹೋಗುತ್ತದೆ. ಈ ಮೂಲಕ ಕೂದಲು ಬೆಳೆದಂತೆ ಅದರಲ್ಲೂ ಡ್ರಗ್ಸ್‌ ರಾಸಾಯನಿಕ ಇರತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ ಡ್ರಗ್ಸ್‌ ಸೇವಿಸಿದ ದಿನದಿಂದ ಗರಿಷ್ಟ 90 ದಿನಗಳ ಕಾಲ ಈ ರಾಸಾಯನಿಕ ಕೂದಲ ಕೋಶದಲ್ಲಿ ಇರುತ್ತದೆ.

ಹೇರ್‌ ಫೊಲಿಕ್‌ ವರ್ಸಸ್‌ ಮೂತ್ರ ಪರೀಕ್ಷೆ:
ಎರಡು ಮೂರು ದಿನಗಳ ಹಿಂದೆ ಡ್ರಗ್ಸ್‌ ಸೇವಿಸಿದರೆ ಮೂತ್ರ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು. ಆದರೆ 4-5 ದಿನಗಳ ಹಿಂದೆ ಡ್ರಗ್ಸ್‌ ಸೇವಿಸಿದರೆ ಮೂತ್ರ ಪರೀಕ್ಷೆಯ ಮೂಲಕ ಪತ್ತೆ ಹಚ್ಚಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೇರ್‌ ಫೋಲಿಕಲ್‌ ಪರೀಕ್ಷೆ ನಡೆಸಲಾಗುತ್ತದೆ.

Hair Follicle Drug Test 2

ವಿಮೆ ಕಂಪನಿಗಳು ನಡೆಸುತ್ತವೆ:
ಗುಣಮುಖನಾದ ವ್ಯಕ್ತಿಯ ಆರೋಗ್ಯದ ಬಗ್ಗೆ ಅನುಮಾನ ಬಂದಲ್ಲಿ ವಿಮೆ ಕಂಪನಿಗಳು ಸಹ ಫೋಲಿಕಲ್‌ ಹೇರ್‌ ಪರೀಕ್ಷೆ ನಡೆಸಲು ಮುಂದಾಗುತ್ತವೆ. ಒಂದು ವೇಳೆ ದೇಶ ನಿಷೇಧಿಸಿದ ಡ್ರಗ್ಸ್‌ ಅಂಶ ವ್ಯಕ್ತಿಯ ದೇಹದಲ್ಲಿ ಕಂಡು ಬಂದಲ್ಲಿ ಕಂಪನಿಗಳು ಈ ಕಾರಣವನ್ನು ಉಲ್ಲೇಖಿಸಿ ವಿಮೆ ನೀಡದೇ ಇರುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *