ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳಿಯರು ಪ್ರತಿಭಟನೆ ಸ್ವಾಗತ ಕೋರಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.
ಕಳಸ ತಾಲೂಕು ಎಂದು ಅಧಿಸೂಚನೆ ಹೊರಡಿಸಿ ವರ್ಷಗಳೇ ಕಳೆದಿವೆ. ಆದರೆ, ಎರಡು ವರ್ಷವಾದರೂ ತಾಲೂಕು ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಎಂದು ಸಂಸದರು, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಇಂದು ಸಂಸದೆ ಶೋಭಾ ಹಾಗೂ ಶಾಸಕ ಕುಮಾರಸ್ವಾಮಿ ವಿವಿಧ ಕಾಮಗಾರಿ ಉದ್ಘಾಟನೆಗೆಂದು ಕಳಸಕ್ಕೆ ಬಂದಿದ್ದರು. ಈ ವೇಳೆ ಮನವಿ ಕೊಡಲು ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು. ಆದರೆ ಸಂಸದರು ಗಾಡಿ ನಿಲ್ಲಿಸದೆ ಹೋದರೆಂದು ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದರು.
2018ರ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದ ವೇಳೆ ಕಳಸವನ್ನು ಹೊಸ ತಾಲೂಕು ಕೇಂದ್ರವಾಗಿ ಅಧಿಕೃತ ಘೋಷಣೆ ಮಾಡಿದ್ದರು. ಕಳಸವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ವರ್ಷಗಳು ಕಳೆದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಬಿಜೆಪಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ, ಕಳಸ ಪಟ್ಟಣವನ್ನ ತಾಲೂಕು ಕ್ಷೇತ್ರವನ್ನಾಗಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಡಿಗೆರೆ ತಾಲೂಕಿಗೆ ಕುದುರೆಮುಖ ತುಂಬಾ ದೂರದಲ್ಲಿದ್ದು, ಪ್ರತಿ ನಿತ್ಯ ಹಲವಾರು ಜನ ಕಚೇರಿ ಕೆಲಸಗಳಿಗಾಗಿ ಕಳಸದಿಂದ ಮೂಡಿಗೆರೆ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗಬೇಕಾಗುತ್ತದೆ. ಒಂದು ವೇಳೆ ಆ ದಿನ ಕೆಲಸ ಆಗದಿದ್ದರೆ ಮರುದಿನ ಅಲ್ಲಿಯೇ ಉಳಿದು ಮರು ದಿನ ತಮ್ಮ ಕೆಲಸವನ್ನು ಮಾಡಿಕೊಳ್ಳ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಎಲ್ಲರೂ ಹೊಟೇಲ್, ಲಾಡ್ಜ್ ನಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ತಾಲೂಕು ಕಳಸವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.