-ಇಬ್ಬರನ್ನ ನೋಡಲು ಮುಗಿಬಿದ್ದ ಗ್ರಾಮಸ್ಥರು
-ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತೀವಿ
ಪಾಟ್ನಾ: ಯುವತಿಯರಿಬ್ಬರು ಮದುವೆ ಆಗುವ ಮೂಲಕ ಪೋಷಕರಿಗೆ ಶಾಕ್ ನೀಡಿರುವ ಘಟನೆ ಬಿಹಾರದ ಬೇತಿಯಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಲಿಂಗದವರು ಮದುವೆಗಳು ನಗರ ಪ್ರದೇಶಗಳಲ್ಲಿ ನಡೆದಿರೋದು ಆಗಾಗ್ಗೆ ವರದಿಯಾಗುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಸಲಿಂಗಿಗಳ ಮದುವೆ ನೋಡಿ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.
ಬೇತಿಯಾ ನಗರದ ಇಶರತ್ (ಪತ್ನಿ), ರಾಮನಗರದ ನಿವಾಸಿ ನಗ್ಮಾ ಖಾತೂನ್ (ಪತಿ) ಮದುವೆಯಾದ ಜೋಡಿ. ಆದ್ರೆ ಕುಟುಂಬಸ್ಥರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಜೋಡಿ ತಾವಿಬ್ಬರೂ ಕಾನೂನುಬದ್ಧವಾಗಿ ಜಲಂಧರ್ ನ್ಯಾಯಾಲಯದಲ್ಲಿ ಮದುವೆ ಆಗಿರುವ ವಿಚಾರವನ್ನ ತಿಳಿಸಿದ್ದಾರೆ.
ಪತಿ ನಗ್ಮಾ ಖಾತೂನ್ ನಿವಾಸಕ್ಕೆ ಬಂದ ಪತ್ನಿ ಇಶರತ್ ಖುಷಿಯಲ್ಲಿ ಎಲ್ಲರನ್ನ ಪರಿಚಯ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರಿಗೂ ಸಿಹಿ ತಿನಿಸುವ ಮೂಲಕ ತಮ್ಮ ಮದುವೆ ವಿಷಯವನ್ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ನಮ್ಮಿಬ್ಬರು ಪ್ರೇಮಪಾಶ ಬಂಧಿಸಿತ್ತು. ನಾವಿಬ್ಬರೂ ಒಬ್ಬರನ್ನೊಬ್ರು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತೇವೆ. ಎರಡು ತಿಂಗಳ ಹಿಂದೆ ಮದುವೆ ಬಂಧನದಲ್ಲಿ ಬಂಧಿಯಾಗಿದ್ದೇವೆ ಎಂದು ಪತ್ನಿ ಇಶರತ್ ಹೇಳಿದ್ದಾರೆ. ಗ್ರಾಮದಲ್ಲಿ ಹುಡುಗಿಯರ ಮದುವೆ ಸುದ್ದಿ ಹರಡುತ್ತಿದ್ದಂತೆ ಇಬ್ಬರನ್ನ ನೋಡಲು ಇಡೀ ಗ್ರಾಮವೇ ಸೇರಿತ್ತು. ಮಹಿಳೆಯರು ನಾ ಮುಂದು ಎಂಬಂತೆ ನವದಂಪತಿಯನ್ನ ನೋಡಿದ್ದಾರೆ.