– ಬರ್ತ್ ಡೇಗೆ ಸರ್ಪ್ರೈಸ್ ಪ್ಲಾನ್ ಮಾಡಿದ್ದ ಅಮ್ಮ-ಅಣ್ಣ
ಹೈದರಾಬಾದ್: ತಾಯಿ ಮತ್ತು ಸಹೋದರ ತನ್ನ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸಿಲ್ಲ ಎಂದು ಯುವತಿಯೊಬ್ಬಳು ಬರ್ತ್ ಡೇ ದಿನವೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೌರ್ಯ ನೈನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ತನ್ನ ಹುಟ್ಟುಹಬ್ಬಕ್ಕೆ ತಾಯಿ ಮತ್ತು ಸಹೋದರ ವಿಶ್ ಮಾಡಿಲ್ಲ ಎಂದು ಬೇಸರದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೈನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೈನಾ ತಾಯಿ ಧನಲಕ್ಷ್ಮಿ ತಿಲಕ್‍ನಗರ ಮೂಲದವರಾಗಿದ್ದು, ಇವರ ಪತಿ ಸುಧೀರ್ ಸಿಂಗ್ 11 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಧನಲಕ್ಷ್ಮಿ ತನ್ನ ಮಗ ಮೌರ್ಯ ರಾಹುಲ್ ಮತ್ತು ಮಗಳು ಮೌರ್ಯ ನೈನಾ ಇಬ್ಬರನ್ನು ಪೋಷಿಸುತ್ತಾ ಜೀವನ ಸಾಗಿಸುತ್ತಿದ್ದರು. ರಾಹುಲ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ತನಗೆ ಬರುವ ಸಂಬಳದೊಂದಿಗೆ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ.
ಮಂಗಳವಾರ ನೈನಾ ಜನ್ಮದಿನ. ಅಂದು ನೈನಾಗೆ ಸರ್ಪ್ರೈಸ್ ಕೊಡಬೇಕು ಎಂದು ತಾಯಿ ಮತ್ತು ಸಹೋದರ ಯೋಜಿಸಿದ್ದರು. ಬೆಳಗ್ಗೆ ಇಬ್ಬರು ನೈನಾಗೆ ಶುಭಾಶಯ ತಿಳಿಸಿದೆ ತಮ್ಮ ಕೆಲಸಕ್ಕೆ ಹೋದರು. ಇತ್ತ ನೈನಾ ಡೆತ್‍ನೋಡ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. “ತಾಯಿ ಮತ್ತು ಸಹೋದರನಿಗೆ ನನ್ನ ಮೇಲೆ ಪ್ರೀತಿ ಇಲ್ಲ. ಅವರು ನನ್ನ ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ” ಎಂದು ಬರೆದು ನೇಣಿಗೆ ಶರಣಾಗಿದ್ದಾಳೆ.
ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ತಾಯಿ ಮತ್ತು ಸಹೋದರ ನೇಣು ಬಿಗಿದ ಸ್ಥಿತಿಯಲ್ಲಿ ನೈನಾಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಹುಟ್ಟುಹಬ್ಬಕ್ಕಾಗಿ ತಾಯಿ ಮತ್ತು ಸಹೋದರ ಅದ್ಧೂರಿಯಾಗಿ ಡಿನ್ನರ್ ಆಯೋಜನೆ ಮಾಡಲು ಪ್ಲಾನ್ ಮಾಡಿದ್ದರು. ಆದರೆ ನೈನಾ ಆತುರದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಕುಟುಂಬದವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.