– ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
– ನೀರಿನಲ್ಲಿ ಮುಳುಗಿತು ಕಾರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ರಾತ್ರಿ ಪೂರ್ತಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ನಗರ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ಸಿಲಿಕಾನ್ ಸಿಟಿಯ ಹೆಚ್‍ಎಸ್‍ಆರ್ ಲೇಔಟ್ ಮತ್ತು ಹೊರಮಾವು ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಶಾಂತಿನಗರ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ಶಿವಾಜಿನಗರ, ಹೆಬ್ಬಾಳ, ರಾಜಾಜಿನಗರ, ಕೋರಮಂಗಲ, ಕೆಆರ್ ಪುರಂ ಮತ್ತು ಹೆಗ್ಡೆ ನಗರ ಸೇರಿದಂತೆ ಹಲವೆಡೆ ವರಣ ಅಬ್ಬರಿಸಿದ್ದಾನೆ.
ಶಿವಾನಂದ ಸರ್ಕಲ್ ಬಳಿಯ ರೈಲ್ವೆ ಟ್ರ್ಯಾಕ್‍ನಲ್ಲಿ ನೀರು ನಿಂತು, ಅದರಲ್ಲಿ ಸಿಲುಕಿದ ಐಷಾರಾಮಿ ಕಾರೊಂದನ್ನು ಹೊರತೆಗೆಯಲಾಗದೆ ಚಾಲಕ ಪರದಾಡಿದ್ದಾನೆ. ಸಹಕಾರ ನಗರದ ರಸ್ತೆಯೊಂದು ಸಂಪೂರ್ಣ ನೀರಿನಿಂದ ತುಂಬಿಹೋಗಿದೆ. ಹೊರಮಾವವಿನಲ್ಲಿ ಮನೆಗಳಿಗೆ ನೀರು ನುಗ್ಗುವ ಮಟ್ಟಕ್ಕೆ ನೀರು ರಸ್ತೆಯಲ್ಲಿ ನಿಂತಿದೆ. ಸಂಜಯ ನಗರದಲ್ಲಿ ಮರವೊಂದು ಉರುಳಿ ಬಿದ್ದಿದೆ. ಹೊರಮಾವಿನ ಕೆಲ ಏರಿಯಾಗಳು ಸಂಪೂರ್ಣ ಜಲಾವೃತವಾಗಿದ್ದು, ಜನ ಮನೆಯಿಂದ ಹೊರಬರುವುದಕ್ಕೂ ಕಷ್ಟವಾಗಿದೆ.
ಹೊರಮಾವಿನ ಕೆಲ ತಗ್ಗು ಪ್ರದೇಶದಲ್ಲಿ ಐದು ಅಡಿಯಷ್ಟು ನೀರು ನಿಂತಿದ್ದು, ಕಾರು ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಕೆಆರ್ ಪುರಂ ವ್ಯಾಪ್ತಿಯ ಹೊರಮಾವು ವಾರ್ಡ್ ಮತ್ತು ಸಾಯಿ ಬಡಾವಣೆಯಲ್ಲಿ ಮಳೆ ನೀರು ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ದಿನಸಿ ಮತ್ತು ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣವಾಗಿ ನೀರುಪಾಲಾಗಿದೆ. ಹೆಚ್‍ಬಿಆರ್ ಲೇಔಟ್ ಕೆಲ ಜಾಗಗಳು ಮಳೆಯಿಂದ ಸಂಪೂರ್ಣ ಜಲಾವೃತವಾಗಿದೆ.
ಬೆಂಗಳೂರಿನ ಬಹುತೇಕ ಕಡೆ ಮಳೆಯಾಗಿದ್ದು, ಇನ್ನೂ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮನೆಗೆ ನೀರು ನುಗ್ಗಿ ಬಿಬಿಎಂಪಿಗೆ ಕರೆ ಮಾಡಿದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಬಂದಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಸಹ ಇದೇ ರೀತಿ ಮನೆಗಳಿಗೆ ನೀರು ನುಗ್ಗುತ್ತದೆ. ಆದರೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು ಎಂದು ಹೊರಮಾವು ಮತ್ತು ಸಾಯಿ ಬಡಾವಣೆಯ ಜನರು ಒತ್ತಾಯ ಮಾಡಿದ್ದಾರೆ.