ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

Public TV
4 Min Read
kangana ranaut sushant singh rajput

– ಮುಂಬೈಗೆ ಕಾಲಿಡಕೂಡದು ಎಂದು ಬೆದರಿಕೆ ಹಾಕಿರುವ ಸೇನಾ
– ಸುಶಾಂತ್ ಸಿಂಗ್ ಪ್ರಕರಣದ ಕುರಿತು ಮಾತಾಡಿದ್ದಕ್ಕೆ ಬೆದರಿಕೆ
– ಭದ್ರತೆ ಹೆಚ್ಚಿಸಿದ್ದಕ್ಕೆ ಶಾಗೆ ಧನ್ಯವಾದ ತಿಳಿಸಿದ ಕ್ವೀನ್

ನವದೆಹಲಿ: ಇತ್ತೀಚೆಗೆ ಸಾವನ್ನಪ್ಪಿದ ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿಯನ್ನು ಡ್ರಗ್ಸ್ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ವಿಚಾರಣೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ ಧ್ವನಿ ಎತ್ತಿದ್ದರು. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ನಟಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆ ಕೇಂದ್ರ ಸರ್ಕಾರ ಕಂಗನಾ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ.

Sanjay Raut

ಕಂಗನಾ ರಣಾವತ್ ಅವರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ಒದಗಿಸಿದ್ದು, ಇದರಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ ಹಾಗೂ 11 ಶಸ್ತ್ರಸಜ್ಜಿತ ಕಮಾಂಡೋಗಳು ಸೇರಿ ಪೊಲೀಸರು ಇರಲಿದ್ದಾರೆ. ಭದ್ರತೆ ಒದಗಿಸಿರುವ ಕುರಿತು ಗೃಹ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ಮಾತನಾಡಿದ್ದು ಬಾಲಿವುಡ್‍ನಲ್ಲಿ ಡ್ರಗ್ಸ್ ಬಳಕೆಯಾಗುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಂಗನಾಗೆ ಬೆದರಿಕೆ ಕರೆಗಳು ಹೆಚ್ಚು ಬರುತ್ತಿವೆ. ಶಿವಸೇನೆ ನಾಯಕರು ಸಹ ಕಂಗನಾ ರಣಾವತ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಶಿವಸೇನೆ ಸಂಸದ ಸಂಜಯ್ ರಾವತ್ ಸಹ ಕಂಗನಾ ಕುರಿತು ವೈಯಕ್ತಿಕ ದಾಳಿ ನಡೆಸಿ, ನಿಂದಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡ ಕೇಂದ್ರ ಸರ್ಕಾರ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ.

Amit Shah

ಈ ಕುರಿತು ಟ್ವೀಟ್ ಮಾಡುವ ಮೂಲಕ ಗೃಹ ಸಚಿವ ಅಮಿತ್ ಶಾಗೆ ಕಂಗನಾ ರಣಾವತ್ ಅಭಿನಂದನೆ ಸಲ್ಲಿಸಿದ್ದಾರೆ. ದೇಶಭಕ್ತರ ಧ್ವನಿಯನ್ನು ಫ್ಯಾಸಿಸ್ಟರು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ. ಅಮಿತ್ ಶಾ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಅವರು ಬಯಸಿದ್ದರೆ ಕೆಲವು ದಿನಗಳ ಬಳಿಕ ಮುಂಬೈಗೆ ಹೋಗಿ ಎಂದು ನನಗೆ ಸಲಹೆ ನೀಡಬಹುದಿತ್ತು. ಆದರೆ ಅವರು ಭಾರತದ ಮಗಳನ್ನು ಗೌರವಿಸಿದ್ದಾರೆ. ಈ ಮೂಲಕ ಅವಳ ಹೆಮ್ಮೆ ಮತ್ತು ಸ್ವಾಭಿಮಾನವನ್ನು ರಕ್ಷಿಸಿದ್ದಾರೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ನಿರ್ವಹಿಸಿದ ಬಗೆ ಕುರಿತು ಶಿವಸೇನೆ ನೇತೃತ್ವದ ಸರ್ಕಾರದ ವಿರುದ್ಧ ಕಂಗನಾ ರಣಾವತ್ ಕಿಡಿ ಕಾರಿದ್ದರು. ಹೀಗಾಗಿ ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರು ವಿಕೃತವಾಗಿ ವರ್ತಿಸಿದ್ದಾರೆ. ಅವರದೇ ಪಕ್ಷದ ಸಂಸದ ಸಂಜಯ್ ರಾವತ್ ಅವಾಚ್ಯ ಶಬ್ದಗಳಿಂದ ಕಂಗನಾರನ್ನು ನಿಂದಿಸಿದ್ದಾರೆ.

ಕಂಗನಾ ಪ್ರಸ್ತುತ ಹಿಮಾಚಲ ಪ್ರದೇಶದ ತಮ್ಮ ಹುಟ್ಟೂರಿನಲ್ಲಿದ್ದು, ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುತ್ತಿರುವ ಮುಂಬೈ ಪೊಲೀಸರು ಹಾಗೂ ಶಿವಸೇನೆಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನೆ ಹಾಗೂ ಎನ್‍ಸಿಪಿ ಕಾರ್ಯಕರ್ತರು ನಟಿ ಮುಂಬೈಗೆ ಆಗಮಿಸಬಾರದು, ಅವರು ಮುಂಬೈನಿಂದ ದೂರ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಬಳಿಕ ಸಂಜಯ್ ರಾವತ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿ ಈ ಕುರಿತು ಸಾಕಷ್ಟು ವಾದ, ವಿವಾದಗಳು ನಡೆಯುತ್ತಿವೆ. ಮಹಾರಾಷ್ಟ್ರ ಗೃಹ ಸಚಿವ ಎನ್‍ಸಿಪಿ ನಾಯಕ ಅನಿಲ್ ದೇಶಮುಖ್ ಸಹ ಈ ಕುರಿತು ಪ್ರತಿಕ್ರಿಯಿಸಿ ಮುಂಬೈ ಸುರಕ್ಷಿತವಲ್ಲ ಎಂಬ ಭಾವನೆ ಇದ್ದರೆ ಅವರು ಇಲ್ಲಿಗೆ ಬರುವುದು ಬೇಡ ಎಂದು ಹೇಳಿದ್ದಾರೆ.

ಮುಂಬೈ ಯಾಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರೀತಿ ಅವರಿಗೆ ಭಾಸವಾಗುತ್ತಿದೆ? ಯಾಕೆ ಈ ರೀತಿ ಹೇಳಿಕೆ ನೀಡಿದರು? ಈ ಕುರಿತು ಕ್ಷಮೆಯಾಚಿಸಬೇಕು ಎಂದು ಸಂಜಯ್ ರಾವತ್ ಸೇರಿ ಅನೇಕ ಶಿವಸೇನೆ ಮುಖಂಡರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಟಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲ ಎಂದು ಸಂಜಯ್ ರಾವತ್ ಮತ್ತೊಮ್ಮೆ ಹೇಳಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹೀಗಾಗಿ ನಟಿಯ ಸುರಕ್ಷತೆ ದೃಷ್ಟಿಯಿಂದ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *