ಕೊನೆ ಕ್ಷಣದಲ್ಲಿ ರಾಗಿಣಿ ಪರ ವಕೀಲ ಕೋರ್ಟ್ ವಿಚಾರಣೆಗೆ ಗೈರಾಗಿದ್ದೇಕೆ?

Public TV
2 Min Read
vlcsnap 2020 09 07 16h49m00s732

– ತಂದೆಯ ನಿರ್ಧಾರದಿಂದ ಮತ್ತೆ ಸಿಸಿಬಿ ಕಸ್ಟಡಿಗೆ ಸೇರಿದ್ರಾ?

ಬೆಂಗಳೂರು: ನಟಿ ರಾಗಿಣಿಯನ್ನು ಮತ್ತೆ 5 ದಿನ ನ್ಯಾಯಾಲಯ ಸಿಸಿಬಿ ಕಸ್ಟಡಿಗೆ ನೀಡಿದೆ. ಆದರೆ ಇಂದು ಕೋರ್ಟಿಗೆ ಹಾಜರು ಪಡಿಸಿದ ಸಂದರ್ಭದಲ್ಲಿ ರಾಗಿಣಿ ಪರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲರು ಕೋರ್ಟಿಗೆ ಗೈರು ಹಾಜರಾಗಿದ್ದು ಏಕೆ ಎಂಬ ಪ್ರಶ್ನೆ ಬಹುತೇಕ ಮಂದಿಯನ್ನು ಕಾಡಿತ್ತು. ಸದ್ಯ ಈ ಪ್ರಶ್ನೆಗಳಿಗೆ ವಕೀಲ ಸುದರ್ಶನ್ ಪಬ್ಲಿಕ್ ಟಿವಿಗೆ ಉತ್ತರಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸುದರ್ಶನ್, ನಾನು ರಾಗಿಣಿ ಅವರ ಪ್ರಕರಣವನ್ನು ಪ್ರತಿನಿಧಿಸುತ್ತಿಲ್ಲ. ಏಕೆಂದರೆ ನನಗೆ ಪ್ರಕರಣವನ್ನು ಪ್ರತಿನಿಧಿಸದಂತೆ ಅವರ ತಂದೆಯವರೆ ಲಿಖಿತ ಸಂದೇಶ ನೀಡಿದ್ದರು. ಆದ್ದರಿಂದ ನಾನು ಪ್ರಕರಣದಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

RAGINI CCB PHOTO 2

ನಟಿ ರಾಗಿಣಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ಎಫ್‍ಐಆರ್ ನಲ್ಲಿ ಆರೋಪಗಳ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ. ಅಲ್ಲದೇ ಸೀಜ್ ಮೆಮೋದಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ರಾಗಿಣಿ ಅವರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿಲ್ಲ. ಆದ್ದರಿಂದ ಪೊಲೀಸರ ತನಿಖೆಯಲ್ಲಿ ಲೋಪವಿದೆ. ಆರೋಪಿ ರವಿಶಂಕರ್ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ವಸ್ತು ಪತ್ತೆಯಾಗಿರುವ ಮಾಹಿತಿ ನೀಡಿಲ್ಲ. ಈ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷಿಗಳು ಇಲ್ಲದೇ, ಕೇವಲ ಸೆಕೆಂಡರಿ ಅಂಶಗಳನ್ನು ಉಲ್ಲೇಖಿಸಿ ಆರೋಪ ಸಾಬೀತು ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರಾಥಮಿಕ ಸಾಕ್ಷಿಗಳಿಗೆ ಪೂರಕವಾಗಿ ಸೆಕೆಂಡರಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈಗ ಸೆಕೆಂಡರಿ ಅಂಶಗಳ ಆಧಾರದಲ್ಲೇ ಅವರ ಬಂಧನವಾಗಿದೆ. ಇದನ್ನೇ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿ ಅರ್ಜಿ ಸಲ್ಲಿಕೆ ಮಾಡಿದ್ದೇವು ಎಂದು ವಕೀಲ ಸುದರ್ಶನ್ ವಿವರಿಸಿದರು.

Actress Ragini Dwivedi 2

ಅಂತಿಮ ಕ್ಷಣದಲ್ಲಿ ರಾಗಿಣಿ ಅವರ ತಂದೆ ಸಂದೇಶ ಕಳುಹಿಸಿ ನನಗೆ ಪ್ರಕರಣದ ಪರ ಹಾಜರಾದಂತೆ ಸೂಚಿಸಿದ್ದರು. ಅಲ್ಲದೇ ಬೇರೆ ವಕೀಲರ ಮೂಲಕ ನ್ಯಾಯಾಲಕ್ಕೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿರುವುದರಿಂದ ಹೊಸ ವಕೀಲರು ಇದೇ ಅರ್ಜಿಯನ್ನು ಪ್ರತಿನಿಧಿಸಬಹುದು ಅಥವಾ ಹೊಸ ಅರ್ಜಿಯನ್ನು ಸಲ್ಲಿಸಬಹುದು. ಪ್ರಕರಣದ ಹಿನ್ನೆಲೆಯನ್ನು ಪರಿಶೀಲನೆ ನಡೆಸಿರುವುದರಿಂದ ಖಂಡಿತ ಅವರಿಗೆ ಜಾಮೀನು ಲಭಿಸುವ ಅವಕಾಶವಿತ್ತು ಎಂದರು.

ಇತ್ತ ನ್ಯಾಯಾಲಯದಲ್ಲಿ ಹಾಜರಿದ್ದ ಸಿಸಿಬಿ ಪರ ವಕೀಲರು ಸಿಸಿಬಿ ಪೊಲೀಸರ ಮನವಿ ಮೇರೆಗೆ ಮತ್ತೆ 10 ದಿನಗಳ ಕಸ್ಟಡಿಗೆ ನೀಡಲು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಐದು ದಿನಗಳ ಕಾಲ ಕಸ್ಟಡಿಗೆ ನೀಡಿದೆ. ಇದನ್ನು ಸ್ವತಃ ಸಿಸಿಬಿ ಪೊಲೀಸರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎನ್ನಲಾಗಿದ್ದು, ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ 2ನೇ ಬಾರಿ ಕಸ್ಟಡಿಗೆ ಮನವಿ ಮಾಡಿದರೆ 2-3 ದಿನ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಂತಿಮ ಕ್ಷಣದಲ್ಲಿ ರಾಗಿಣಿ ಅವರ ತಂದೆ ಪ್ರಕರಣದ ವಕೀಲರನ್ನು ಬದಲಿಸಿದ್ದು ರಾಗಿಣಿ ಅವರಿಗೆ ಮುಳುವಾಯಿತು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *