ತಿರುವನಂತಪುರಂ: ಪಾಪಿ ಮಗನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನೇ ಥಳಿಸಿ ಕೊಲೆಗೈದ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಆರೋಪಿಯನ್ನು ಜೋಸಿ ಜಾನ್(37) ಎಂದು ಗುರುತಿಸಲಾಗಿದೆ. ಈತ ತಂದೆ ಜಾನ್ ಥೋಮಸ್ ಅಕಾ ಕೋಚುಟ್ಟಿ(65) ಅವರನ್ನು ಕೊಲೆ ಮಾಡಿದ್ದಾನೆ.
ಮೃತ ಜಾನ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಇವರ ಎರಡೂ ಕಿಡ್ನಿಗಳು ಕೂಡ ಫೇಲ್ ಆಗಿದ್ದು, ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್ ಗೆ ಒಳಗಾಗಿದ್ದಾರೆ. ಕಳೆದ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇವರ ಮೇಲೆ ಮಗ ದಾಳಿ ಮಾಡಿದ್ದಾನೆ.
ಅನಾರೋಗ್ಯಕ್ಕೀಡಾಗಿದ್ದರಿಂದ ಮಂಚದಲ್ಲಿ ಮಲಗಿದ್ದ ತಂದೆಯನ್ನು ನೆಲಕ್ಕೆ ತಳ್ಳಿ ಬಳಿಕ ಹಿಗ್ಗಾಮುಗ್ಗ ಥಳಿಸಿದ್ದಾನೆ. ಪರಿಣಾಮ ತಂದೆಯ ಪಕ್ಕೆಲುಬುಗಳು ಮುರಿತಕ್ಕೊಳಗಾಗಿತ್ತು. ಇತ್ತ ಮಗನ ರೌದ್ರನರ್ತನದಿಂದ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ನಿವಾಸಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾನ್ ಥೋಮಸ್ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಸದ್ಯ ಆರೋಪಿ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.