ಆನ್‍ಲೈನ್ ಕ್ಲಾಸಿಗೆ ನೆಟ್‍ವರ್ಕ್ ಪ್ರಾಬ್ಲಂ – ಹಳ್ಳಿ ತೊರೆಯುತ್ತಿರೋ ಮಲೆನಾಡಿಗರು

Public TV
2 Min Read
CKM

ಚಿಕ್ಕಮಗಳೂರು: ಕೊರೊನಾ ಕಾಲದ ಆನ್‍ಲೈನ್ ಶಿಕ್ಷಣಕ್ಕಾಗಿ ಮಲೆನಾಡಿಗರು ಅಜ್ಜ-ಮುತ್ತಜ್ಜನ ಕಾಲದಿಂದ ಬದುಕಿ-ಬಾಳಿದ ಮನೆ-ಮಠ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

ಹೌದು. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಆಸು-ಪಾಸಿನಲ್ಲಿ ಹತ್ತಾರು ಗ್ರಾಮಗಳಿವೆ. ಅವರೆಲ್ಲಾ ಬಿ.ಎಸ್.ಎನ್.ಎಲ್. ನೆಟ್‍ವರ್ಕ್ ಅವಲಂಭಿಸಿದ್ದರು. ಆದರೆ ಈಗ ಈ ನೆಟ್ ವರ್ಕ್ ಹೆಸರಿಗಷ್ಟೆ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ನೆಟ್‍ವರ್ಕ್ ಇರಲ್ಲ. ಬೇಸಿಕ್ ಮೊಬೈಲ್‍ಗೂ ನೆಟ್ ವರ್ಕ್ ಸಿಗುತ್ತಿಲ್ಲ. ಇದ್ದರೂ ಫ್ರಿಕ್ವೆನ್ಸಿ ಇರಲ್ಲ. ಮಳೆ-ಗಾಳಿ ಬಂದರೆ ಇರೋ ನೆಟ್ ವರ್ಕ್ ಕೂಡ ಹೋಗುತ್ತೆ. ಪುನಃ ಬಂದರೆ ಬಂತು, ಇಲ್ಲವಾದ್ರೆ ಇಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಮಲೆನಾಡಿಗರು ಹಳ್ಳಿ ಬಿಟ್ಟು ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

CKM 3

ಮುತ್ತೋಡಿ ಅರಣ್ಯ ವಲಯದ ಆಸುಪಾಸಿನ ಗಾಳಿಗುಡ್ಡೆ ಎಂಬ ಗ್ರಾಮದ ಕಲ್ಲೇಶ್ ಕುಟುಂಬ ಇದೀಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಕಲ್ಲೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಸಾಫ್ಟ್ ವೇರ್ ಉದ್ಯೋಗಿ. ಮತ್ತೊಬ್ಬರು ಮೈಸೂರಿನಲ್ಲಿ ಫೈನಲ್ ಇಯರ್ ಬಿಎಸ್‍ಸಿ ಓದುತ್ತಿದ್ದಾರೆ. ಇಬ್ಬರಿಗೂ ನೆಟ್‍ವರ್ಕ್ ಸಮಸ್ಯೆ ಎಂದು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ. ಈಗಾಗಲೇ ಮಗಳಿಗೆ ಆನ್‍ಲೈನ್ ಕ್ಲಾಸ್ ಎಂದು ಹೇಳಿದ್ದಾರೆ. ತರಗತಿ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ನಗರದಲ್ಲಿ ಮನೆ ಮಾಡಿದ್ದಾರೆ.

Online Class

ಅಜ್ಜ-ಮುತ್ತಜ್ಜನ ಕಾಲದಿಂದಲೂ ಬದುಕಿ-ಬಾಳಿದ ಮನೆ-ತೋಟ, ಹುಟ್ಟಿ ಬೆಳೆದ ಊರು ಎಲ್ಲವನ್ನೂ ಬಿಟ್ಟು ನೆಟ್ ವರ್ಕ್‍ಗಾಗಿ ನಗರ ಪ್ರದೇಶದತ್ತ ಮುಖ ಮಾಡಿದ್ದಾರೆ. ಸರ್ಕಾರ ಹಾಗೂ ಜನನಾಯಕರು ಇದು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ ಇದೇನಾ ಡಿಜಿಟಲ್ ಎಂದು ಹಳ್ಳಿಗರು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಪ್ರಶ್ನಿಸಿದ್ದಾರೆ. ನೆಟ್ ವರ್ಕ್‍ಗಾಗಿ ಊರನ್ನ ಬಿಟ್ಟು ಬಂದಿರೋ ಕುಟುಂಬ ನಗರ ಪ್ರದೇಶದಿಂದಲೇ ಹಳ್ಳಿಗಳಿಗೆ ಓಡಾಡ್ತಿದ್ದಾರೆ. ಹಳ್ಳಿಗೆ ಹೋಗಿ ಸಂಜೆವರೆಗೂ ಹೊಲಗದ್ದೆ-ತೋಟಗಳಲ್ಲಿ ಕೆಲಸ ಮಾಡಿಸಿ ಸಂಜೆ ವೇಳೆಗೆ ಮತ್ತೆ ಸಿಟಿಯತ್ತ ಮುಖ ಮಾಡ್ತಿದ್ದಾರೆ.

CKM 1

ಕೆಲವರು ಮಕ್ಕಳನ್ನ ನಗರದಲ್ಲಿ ಬಿಟ್ಟು ಆಗಾಗ್ಗೆ ಬಂದು ಹೋಗ್ತಿದ್ದಾರೆ. ಆರ್ಥಿಕವಾಗಿ ಅನುಕೂಲಸ್ಥರು ಹೀಗೆ ನಗರ ಪ್ರದೇಶಗಳಿಗೆ ಬಂದು ಮನೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಕೆಲ ಕುಟುಂಬಗಳಿಗೆ ಮಕ್ಕಳಿಗೆ ಮೊಬೈಲ್ ಕೊಡಿಸೋದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಅಂತದ್ದರಲ್ಲಿ ಅವರು ಮಕ್ಕಳ ಭವಿಷ್ಯಕ್ಕೆ ಏನು ಮಾಡುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಹೇಗೋ ಸಾಲ-ಸೋಲ ಮಾಡಿ ಮೊಬೈಲ್ ಕೊಡಿಸಬಹುದು. ಆದರೆ ನೆಟ್‍ವರ್ಕ್ ಹಳ್ಳಿ ಬಿಟ್ಟು ಬಂದು ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ಮಕ್ಕಳಿಗೆ ಓದಿಸೋದು ಕಷ್ಟಸಾಧ್ಯ. ಹೀಗಿರುವಾಗ ಮಧ್ಯಮ ವರ್ಗ ಹಾಗೂ ಬಡಕುಟುಂಬ ಮಕ್ಕಳ ಭವಿಷ್ಯದ ಬಗ್ಗೆ ಯಾವ ಏನು ಮಾಡ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ONLINE

ಇಷ್ಟೆ ಅಲ್ಲ ಚಿಕ್ಕಮಗಳೂರು ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಇರುವ ಊರು. ಜಿಲ್ಲೆಯಲ್ಲಿ ಇಂತಹ ನೂರಾರು ಕುಗ್ರಾಮಗಳಿವೆ. ನೀರು, ಕರೆಂಟ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳು ಮಲೆನಾಡಲ್ಲಿ ಇಂದಿಗೂ ಜೀವಂತ. ಅಲ್ಲಿನ ಮಕ್ಕಳು ಹೇಗೆ ಆನ್‍ಲೈನ್ ಕ್ಲಾಸಿಗೆ ಮುಂದಾಗುತ್ತಾರೋ ದೇವರೇ ಬಲ್ಲ. ನಮ್ಮದು ಡಿಜಿಟಲ್ ಭಾರತ ಅನ್ನೋ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಳ್ಳಿಗರು ಇದೇನಾ ಡಿಜಿಟಲ್ ಭಾರತ ಎಂದು ಪ್ರಶ್ನಿಸಿಸಿದ್ದಾರೆ. ಸರ್ಕಾರ ಆನ್‍ಲೈನ್ ಕ್ಲಾಸ್ ಜಾರಿಗೆ ತರೋ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಲಿ ಅನ್ನೋದು ಮಲೆನಾಡಿಗರ ಆಗ್ರಹವಾಗಿದೆ.

CKM 5

Share This Article
Leave a Comment

Leave a Reply

Your email address will not be published. Required fields are marked *