– ನಟರ ಜೊತೆಗಿನ ಫೋಟೋ ಡೀಲರ್ ಫೋನಿನಲ್ಲಿ ಪತ್ತೆ
ಬೆಂಗಳೂರು: ಕನ್ನಡದ ಸ್ಟಾರ್ ನಟಿ ಓದಿದ ಕಾಲೇಜಿನಲ್ಲೇ ಡ್ರಗ್ ಪೆಡ್ಲರ್ ಅನಿಕಾ ಕೂಡ ವ್ಯಾಸಂಗ ಮಾಡಿದ್ದಾಳೆ ಎಂಬ ಮಾಹಿತಿ ಎನ್‍ಸಿಬಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಗುರುವಾರ ಬಂಧಿಸಿದ ಲೇಡಿ ಡ್ರಗ್ ಡೀಲರ್ ಅನಿಕಾ ವಿಚಾರಣೆ ಮಾಡುತ್ತಿರುವ ಎನ್‍ಸಿಬಿ ಅಧಿಕಾರಿಗಳಿಗೆ ಒಂದೊಂದೆ ಸ್ಫೋಟಕ ಮಾಹಿತಿಗಳು ಸಿಕ್ಕುತಿವೆ. ಅನಿಕಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದಳು. ಇದೇ ಕಾಲೇಜಿನಲ್ಲಿ ಓದಿದ್ದ ಕನ್ನಡ ಸ್ಟಾರ್ ನಟಿಯೊಬ್ಬರು ಆಕೆಯ ಸಹಪಾಠಿ ಎಂಬ ವಿಚಾರ ಈಗ ಅಧಿಕಾರಿಗಳಿಗೆ ಗೊತ್ತಾಗಿದೆ.
ಇದರ ಜೊತೆಗೆ ಆ ಸ್ಟಾರ್ ನಟಿ ಕೇವಲ ಡ್ರಗ್ ಡೀಲರ್ ಸಹಪಾಠಿಯಗಿದ್ಲಾ? ಇಲ್ಲ ಆ ಸ್ಟಾರ್ ನಟಿಯೇ ಅನಿಕಾಳನ್ನು ಚಿತ್ರರಂಗದ ಮಂದಿಗೆ ಪರಿಚಯ ಮಾಡಿಕೊಟ್ಟಳಾ ಎಂಬ ಅನುಮಾನ ಮೂಡಿದೆ. ಇದೇ ನಿಟ್ಟಿನಲ್ಲಿ ಎನ್‍ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಸದ್ಯ ಅನಿಕಾಳನ್ನು ಒಂದು ವಾರದ ತನಕ ತಮ್ಮ ಕಸ್ಟಡಿಗೆ ತೆಗೆದುಕೊಂಡಿರುವ ಎನ್‍ಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಲಿದ್ದು, ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.
ಇದರ ಬೆನ್ನಲ್ಲೇ ಡ್ರಗ್ ಡೀಲರ್ ಅನಿಕಾಳ ಮೊಬೈಲ್ ಫೋನ್ ಅನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಅನಿಕಾ ಕನ್ನಡದ ನಟರಿಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಅಧಿಕಾರಿಗಳಿಗೆ ಸಿಕ್ಕಿವೆ ಎನ್ನಲಾಗಿದೆ. ಆದರೆ ಅನಿಕಾ ನಟರನ್ನು ಯಾವ ಸಮಯದಲ್ಲಿ ಮತ್ತು ಯಾಕೆ ಭೇಟಿಯಾಗದ್ದಳು ಎಂಬ ಮಾಹಿತಿ ಹೊರಬಂದಿಲ್ಲ.